ಹೊಸ ಕಾರು ಖರೀದಿಸಿ ಖುಷಿಯಲ್ಲಿ ಊರಿಗೆ ಮರಳುತ್ತಿದ್ದ ಯುವಕನನ್ನು ಅನೈತಿಕ ಸಂಬಂಧದ ವೈಷಮ್ಯದ ಹಿನ್ನೆಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿ, ಕಾರಿನೊಂದಿಗೆ ಸುಟ್ಟು ಹಾಕಿರುವ ಘಟನೆ ಜಮಖಂಡಿ ತಾಲೂಕಿನ ಕನ್ನೋಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಈ ಅತ್ಯಂತ ಕ್ರೌರ್ಯದ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಭಯವನ್ನುಂಟು ಮಾಡಿದೆ.
ಮೃತ ಯುವಕ ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36). ಏಪ್ರಿಲ್ 20ರಂದು ಸೋಮು ಜಮಖಂಡಿಯಲ್ಲಿ ಹೊಸ ಕಾರು ಖರೀದಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ. ಶೋರೂಂನಲ್ಲಿ ಕಾರು ಖರೀದಿ ವೇಳೆ ತೆಗೆದ ಫೋಟೋಗಳನ್ನು ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದರು.
ಈ ಸ್ಟೇಟಸ್ ನೋಡಿದ ಅದೇ ಗ್ರಾಮದ ಸದಾಶಿವ ಪಡಸಲಗಿ (ಮೃತನ ದೊಡ್ಡಪ್ಪನ ಮಗ), ಹಿರೇಪಡಸಲಗಿ ಗ್ರಾಮದ ರವಿ ಪಾಟೀಲ, ಚಿಕ್ಕಪಡಸಲಗಿ ಗ್ರಾಮದ ಮಹಾವೀರ ಧರೆಪ್ಪನವರ, ಭೀರಪ್ಪ ಅಡಿಹುಡಿ ಮತ್ತು ಅಡಿಹುಡಿ ಗ್ರಾಮದ ಮಲ್ಲು ನಾವಿ ಎಂಬ ಐವರು ಆರೋಪಿಗಳು ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹೇಗೆ ನಡೆಯಿತು? ಸೋಮು ಕಾರಿನಲ್ಲಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಆರೋಪಿಗಳು ಅಡ್ಡಗಟ್ಟಿದರು. ನಂತರ ಯುವಕನನ್ನು ಕಾರಿನಿಂದ ಹೊರಗೆಳೆದು ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ರಸ್ತೆಯ ಮೇಲೆ ಬಿದ್ದಿದ್ದ ಸೋಮು ಮತ್ತು ಹೊಸ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಘಟನೆ ಸಂಜೆ 7.35ರ ಸುಮಾರಿಗೆ ನಡೆದಿದೆ.
ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ಸದಾಶಿವ ಪಡಸಲಗಿ ತನ್ನ ಪತ್ನಿಯೊಂದಿಗೆ ಸೋಮುಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯಿಂದ ಈ ಹತ್ಯೆಗೆ ಪ್ರೇರೇಪಿಸಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆಯ ಕ್ರೌರ್ಯ ಕಂಡು ಕನ್ನೋಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
