ಹುಬ್ಬಳ್ಳಿ: ಮುಸ್ಲಿಂ ಸಮುದಾಯದ ಕಿಚಡಿ ಕಾರ್ಯಕ್ರಮದಲ್ಲಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಜಮಾತ್ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಬೇಪಾರಿ ಪ್ಲಾಟ್‌ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇಪಾರಿ ಪ್ಲಾಟ್‌ನಲ್ಲಿ ರವಿವಾರ ಮುಸ್ಲಿಂ ಸಮುದಾಯದವರು ಕಿಚಡಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಅಲ್ತಾಫ್ ಧಾರವಾಡ ಮತ್ತು ಆತನ ಗೆಳೆಯರು ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಲ್ಲಿ ತೊಡಗಿದ್ದರು. ಜಮಾತ್ ಮುಖಂಡ ಸಾಧಿಕ್ ಇವರಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ, ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಲ್ತಾಫ್ ಮತ್ತು ಆತನ ಜೊತೆಗಿದ್ದ ನಾಲ್ಕು ಜನ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಸಾಧಿಕ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಾಧಿಕ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆತನನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೇಪಾರಿ ಪ್ಲಾಟ್‌ನಲ್ಲಿ ಅಲ್ತಾಫ್‌ನಂತಹ ಕೆಲವು ಯುವಕರು ತಮ್ಮ ಪುಂಡಾಟಿಕೆಯಿಂದ ಸ್ಥಳೀಯರಿಗೆ ಕಿರಿಕಿರಿ ಉಂಟುಮಾಡಿದ್ದಾರೆ. ಈ ಘಟನೆಯಿಂದ ಕಂಗೆಟ್ಟಿರುವ ಸ್ಥಳೀಯರು, ಇಂತಹ ಪುಂಡ ರೌಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಾರೆ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.