ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ: ಝೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

123 (71)

ಹಾಸನ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಝೊಮ್ಯಾಟೋ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಹಾಸನ ಹೊರವಲಯದ ಬೂವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿ ಮುತ್ತತ್ತಿ ಗ್ರಾಮದ ಎಸ್.ಬಿ.ಎಂ. ಲೇಔಟ್‌ನ ನಿವಾಸಿ ಶರತ್ (40). ಶರತ್ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಫುಡ್ ಡೆಲಿವರಿಗಾಗಿ ಹಾಸನ ನಗರದಿಂದ ಗೆಂಡೆಗಟ್ಟೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದಾಗ, ಬೆಂಗಳೂರು ಕಡೆಯಿಂದ ಬಂದ ಮತ್ತೊಂದು ಬೈಕ್‌ನೊಂದಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಶರತ್‌ನ ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶರತ್ ಹೆಲ್ಮೆಟ್ ಧರಿಸಿರದ ಕಾರಣ ತಲೆಗೆ ಗಂಭೀರ ಗಾಯವಾಗಿ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಸೇತುವೆಗೆ ಢಿಕ್ಕಿ: ನಾಲ್ವರು ದುರ್ಮರಣ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಹಳ್ಳದ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರ ಹೆಸರು ಇನ್ನೂ ತಿಳಿದುಬಂದಿಲ್ಲ. ನಾಗರಾಜ, ನಾಗಭೂಷಣ, ಮುರುಳಿ, ಆನಂದ ಎಂಬವರನ್ನು ತೀವ್ರ ಗಾಯಗೊಂಡ ಹಿನ್ನಲೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತಕ್ಕೊಳಗಾದ ಗಾಯಾಳುಗಳು ಹಾಗೂ ಮೃತರು ತೆಲಂಗಾಣ ರಾಜ್ಯದ ಹಿಂದೂಪುರ ನಿವಾಸಿಗಳು ಎಂದು ಹೇಳಲಾಗಿದೆ.

ತೆಲಂಗಾಣದ ರಾಜ್ಯದ ಹಿಂದೂಪುರ ಗ್ರಾಮದಿಂದ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣಕ್ಕೆ ಕುರಿ ವ್ಯಾಪಾರಕ್ಕಾಗಿ ತೆರಳಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರು ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version