ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕುಣಿಗಲ್‌ನಲ್ಲಿ ಸುರಕ್ಷಿತವಾಗಿ ಪತ್ತೆ!

BeFunky collage 2026 02 14T233429.367

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಹಾಸನ ಜಿಲ್ಲೆಯ ಮದುವೆಗೆ ಆಗಮಿಸಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗುರುವಾರ ರಾತ್ರಿ ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆಯನ್ನು ತುಮಕೂರು ಜಿಲ್ಲೆಯ ಕುಣಿಗಲ್‌‌‌ನಲ್ಲಿ ಸುರಕ್ಷಿತವಾಗಿ ಪತ್ತೆ ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಜೀವಂತವಾಗಿ ಇದ್ದು ಎಂದು ಖಚಿತಪಡಿಸಲಾಗಿದೆ. ಈ ಸುದ್ದಿಯಿಂದ ಪೊಲೀಸ್ ಇಲಾಖೆಯೊಂದಿಗೆ ಕುಟುಂಬಸ್ಥರೂ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಪ್ರಕರಣ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ನಡೆದಿದ್ದು, ಮಹಿಳೆಯನ್ನು ಪ್ರಿಯಾಂಕಾ (29) ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಇವರು ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಫೆಬ್ರವರಿ 12ರಂದು ಆಗಮಿಸಿದ್ದರು. ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ಬಂದಿದ್ದ ಅವರು ನಿಗೂಢವಾಗಿ ಕಣ್ಮರೆಯಾಗಿದ್ದರು. ನಂತರ ಕಲ್ಕೆರೆ ಬಳಿ ಕೆರೆ ದಂಡೆಯಲ್ಲಿ ಅವರ ಒಳ ಉಡುಪು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಕೊಲೆ ಅಥವಾ ಅಪಹರಣ ಶಂಕೆಯನ್ನು ಹುಟ್ಟುಹಾಕಿತ್ತು. ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಪ್ರಕರಣಕ್ಕೆ ಸಂತೋಷಕರ ತಿರುವು ಸಿಕ್ಕಿದೆ. ಮಹಿಳೆ ಕುಣಿಗಲ್‌ಗೆ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಏಕೆ ನಾಪತ್ತೆಯಾದರು, ಯಾವ ಕಾರಣಕ್ಕೆ ಇಂತಹ ಸ್ಥಿತಿ ಉಂಟಾಯಿತು ಎಂಬುದರ ಬಗ್ಗೆ ಇನ್ನೂ ಸಂಪೂರ್ಣ ವಿವರಗಳು ಬಹಿರಂಗವಾಗಿಲ್ಲ. ಆದರೆ ಜೀವಂತ ಪತ್ತೆಯಾಗಿರುವುದು ಎಲ್ಲರಿಗೂ ದೊಡ್ಡ ನೆಮ್ಮದಿ ನೀಡಿದೆ.

ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಘಟನೆಯ ಹಿನ್ನೆಲೆಯನ್ನು ಖಚಿತಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಘಟನೆಯಿಂದ ಮಹಿಳೆಯರ ಸುರಕ್ಷತೆ ಮತ್ತು ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯ ಮಹತ್ವ ಮತ್ತೊಮ್ಮೆ ಎದ್ದುಕಾಣಿಸಿದೆ.

Exit mobile version