ಅಮಾಯಕ ಮಹಿಳೆಯರೇ ಇವರ ಟಾರ್ಗೆಟ್: ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್‌

Untitled design 2026 02 18T154331.620

ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಅಮಾಯಕ ಹಾಗೂ ಅಸಹಾಯಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಅರೆಕಾಲಿಕ ಉಪನ್ಯಾಸಕಿ ನಾಗಲಕ್ಷ್ಮೀ ಮುಖ್ಯ ಆರೋಪಿ ಎಂದು ತಿಳಿದುಬಂದಿದೆ. ಆಕೆಯೇ ಈ ಸಂಪೂರ್ಣ ಜಾಲದ ಕಿಂಗ್‌ಪಿನ್ ಆಗಿದ್ದು, ಈ ಹಿಂದೆ ಸಹ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆಕೆಯ ಪತಿ ಹಾಗೂ ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಧರ್ಮರಾಜು ಅಲಿಯಾಸ್ ಫಣಿ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಈ ತಂಡ ಬಡ ಹಾಗೂ ಕುಟುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೊದಲು ಸ್ನೇಹ ಬೆಳೆಸುತ್ತಿತ್ತು. ಬಳಿಕ ಅವರ ವೈಯಕ್ತಿಕ ಬದುಕಿನ ವಿಚಾರಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಯೋಜನೆ ರೂಪಿಸುತ್ತಿತ್ತು. ಮಹಿಳೆಯರ ಮನೆಗೆ ಪರಿಚಯಸ್ಥರು ಭೇಟಿ ನೀಡಿದ ಸಂದರ್ಭಗಳನ್ನು ಗಮನಿಸಿ, ಆ ಸಂದರ್ಭಗಳ ಫೋಟೋಗಳನ್ನು ಗುಪ್ತವಾಗಿ ಸೆರೆಹಿಡಿಯಲಾಗುತ್ತಿತ್ತು. ನಂತರ ಆ ಚಿತ್ರಗಳನ್ನು ಆಧಾರವಾಗಿಸಿಕೊಂಡು ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಯರ ಮೇಲೆ ಒತ್ತಡ ಹೇರಲಾಗುತ್ತಿತ್ತು.

ಒಂದು ಪ್ರಕರಣದಲ್ಲಿ, ಸಂತ್ರಸ್ತೆಯ ಮನೆಗೆ ಪರಿಚಿತ ವ್ಯಕ್ತಿಯೊಬ್ಬರು ಬಂದಿದ್ದ ವೇಳೆ ಮತ್ತೊಬ್ಬ ಮಹಿಳೆ ಅವರಿಬ್ಬರ ಫೋಟೋ ತೆಗೆದು ನಾಗಲಕ್ಷ್ಮಿಗೆ ಕಳುಹಿಸಿದ್ದಾಳೆ ಎನ್ನಲಾಗಿದೆ. ಈ ಫೋಟೋವನ್ನು ನೆಪ ಮಾಡಿಕೊಂಡು ನಾಗಲಕ್ಷ್ಮಿ ಮತ್ತು ಆಕೆಯ ತಂಡ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಆ ವ್ಯಕ್ತಿಯ ವಿರುದ್ಧ ರೇಪ್ ಪ್ರಕರಣ ದಾಖಲಿಸಲು ಒತ್ತಾಯ ಮಾಡಿದ್ದರು. “ನಿನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ಕೊಡು, ನಿನಗೂ ಹಣ ಸಿಗುತ್ತದೆ, ನಮಗೂ ಹಣ ಸಿಗುತ್ತದೆ” ಎಂದು ಆಕೆಯನ್ನು ಒತ್ತಾಯಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಆದರೆ ಸಂತ್ರಸ್ತೆ ಇದಕ್ಕೆ ಒಪ್ಪದಿದ್ದಾಗ, ಲ್ಯಾಬ್ ನಡೆಸುತ್ತಿದ್ದ ಫಣಿಯನ್ನು ಮನೆಗೆ ಕರೆಸಿ ಬಲವಂತವಾಗಿ ಮೆಡಿಕಲ್ ಪರೀಕ್ಷೆ ನಡೆಸಿದಂತೆ ನಾಟಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಫಣಿ ಸಂತ್ರಸ್ತೆಯ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಾ ಪರೀಕ್ಷೆ ನಡೆಸಿದ ಆರೋಪ ಕೇಳಿಬಂದಿದ್ದು, ಇದರಿಂದ ಮಹಿಳೆ ಮಾನಸಿಕವಾಗಿ ತೀವ್ರ ಹಿಂಸೆ ಅನುಭವಿಸಿದ್ದಾಳೆ.

ಮಹಿಳೆ ದೂರು ನೀಡಲು ನಿರಾಕರಿಸಿದಾಗ, “ನಿನ್ನ ವಿರುದ್ಧ ಸಾಕ್ಷ್ಯಗಳಿವೆ. ದೂರು ಕೊಡದಿದ್ದರೆ ಈ ವಿಷಯವನ್ನು ನಿನ್ನ ಗಂಡನಿಗೆ ಹೇಳುತ್ತೇವೆ” ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ಹಲವು ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಣ ದೋಚಿದ್ದ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಾಗಲಕ್ಷ್ಮೀ ತಾನು ವಕೀಲೆಯೆಂದು ಹೇಳಿಕೊಂಡು ಜನರಲ್ಲಿ ವಿಶ್ವಾಸ ಮೂಡಿಸುತ್ತಿದ್ದಳಂತೆ. ಈ ಹೆಸರಿನಲ್ಲಿ ಕಾನೂನು ಪ್ರಕ್ರಿಯೆಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾಳೆ ಎನ್ನಲಾಗಿದೆ.

ಸಂತ್ರಸ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಹೊಳೆನರಸೀಪುರ ಪೊಲೀಸರು ದೂರು ದಾಖಲಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಾಲ್ವರನ್ನು ಬಂಧಿಸಿದ್ದಾರೆ.

Exit mobile version