ಹಾಸನದಲ್ಲಿ ಸರಣಿ ಹೃದಯಾಘಾತ: ಒಂದೇ ದಿನ ಮೂವರು ಬಲಿ, 45 ದಿನದಲ್ಲಿ 35 ಸಾವು!

Untitled design (86)

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಕಳೆದ 45 ದಿನಗಳಲ್ಲಿ ಒಟ್ಟು 35 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಇಂದು ಮತ್ತೆ ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದು, ಜಿಲ್ಲೆಯಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದ 21 ವರ್ಷದ ಮದನ್, ಚಿಕ್ಕಕೊಂಡಗುಳ ಗ್ರಾಮದ ಭಾವನ ಮನೆಗೆ ಎರಡು ದಿನಗಳ ಹಿಂದೆ ಭೇಟಿಗಾಗಿ ಆಗಮಿಸಿದ್ದ. ಗುರುವಾರ ರಾತ್ರಿ ಎದೆನೋವಿನಿಂದ ಕುಸಿದು ಬಿದ್ದ ಮದನ್, ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟ. ಮದನ್ ತನ್ನ ತಾಯಿಯೊಂದಿಗೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ.

ADVERTISEMENT
ADVERTISEMENT

ರಾಜಮ್ಮ (55): ಆಲೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ರಾಜಮ್ಮ, ಜೂನ್ 14ರಂದು ಮನೆಯಲ್ಲಿ ಅಡಿಗೆ ಮಾಡುವಾಗ ಎದೆನೋವಿನಿಂದ ಕುಸಿದು ಸಾವನ್ನಪ್ಪಿದ್ದಾರೆ.

ವಿಮಲಾ (55-60): ಹಾಸನ ನಗರದ ದಾಸರಕೊಪ್ಪಲಿನ ವಿಮಲಾ ಕೂಡ ರಾತ್ರಿ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಡವಾಗಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಸಾವುಗಳ ಕಾರಣವನ್ನು ಕಂಡುಹಿಡಿಯಲು ಆರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಮತ್ತು ಹೃದಯರೋಗ ತಜ್ಞರು ಸೇರಿದ್ದಾರೆ.

ಕಳೆದ 45 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 35 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಆರೋಗ್ಯ ತಜ್ಞರ ಗಮನಕ್ಕೆ ಬಂದಿದ್ದು, ಜನರಲ್ಲಿ ಆರೋಗ್ಯ ಜಾಗೃತಿಯ ಅಗತ್ಯವನ್ನು ಒತ್ತಿಹೇಳಲಾಗಿದೆ. ಒತ್ತಡ, ಜೀವನಶೈಲಿ, ಮತ್ತು ಆರೋಗ್ಯ ಕಾಳಜಿಯ ಕೊರತೆಯಿಂದಾಗಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ ವ್ಯಾಯಾಮ, ಬಿರುಸಿನ ನಡಿಗೆ, ಯೋಗ ಮತ್ತು ಆಹಾರದಲ್ಲಿ ಕಾಳಜಿವಹಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Exit mobile version