ಪೂರ್ವಾಶ್ರಮದ ಧರ್ಮ ಬೆಳಕಿಗೆ: ಪೀಠ ತೊರೆದ ಯುವ ಸ್ವಾಮೀಜಿ!

ಚೌಡಹಳ್ಳಿಯ ಮಠದಲ್ಲಿ ಧರ್ಮ ವಿವಾದ!

222 (8)

ಗುಂಡ್ಲುಪೇಟೆ: ಪೂರ್ವಾಶ್ರಮದ ಧರ್ಮ ಬೆಳಕಿಗೆ ಬಂದ ಹಿನ್ನಲೆ ಯುವ ಸ್ವಾಮೀಜಿ ಪೀಠ ತೊರೆದ ಘಟನೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು, ಚೌಡಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದ ಶಾಖಾ ಮಠಕ್ಕೆ ಕಳೆದ ಒಂದೂವರೆ ತಿಂಗಳ ಹಿಂದೆ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಮಹಮ್ಮದ್ ನಿಸಾರ್(22) ಅಲಿಯಾಸ್ ನಿಜಲಿಂಗಸ್ವಾಮೀಜಿ ಬಸವ ಕಲ್ಯಾಣದ ಸ್ವಾಮೀಜಿಯೊಬ್ಬರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪೀಠಾಧಿಪತಿಯಾಗಿ ಬಂದಿದ್ದರು. ನಂತರ ಧಾರ್ಮಿಕ ಕಾರ್ಯಗಳು ಮತ್ತು ಪ್ರವಚನ ನಡೆಸಿಕೊಂಡು ಹೋಗುತ್ತಿದ್ದರು.

ಆ.1ರಂದು ಮಠದ ಭಕ್ತರಾದ ಗ್ರಾಮದ ಯುವಕರೊಬ್ಬರಿಗೆ ಶ್ರೀಗಳು ಮೊಬೈಲ್ ನೀಡಿದ್ದರು. ಈ ವೇಳೆ ಮೊಬೈಲ್‍ನಲ್ಲಿದ್ದ ಇವರ ಆಧಾರ್ ಕಾರ್ಡ್‌ನಲ್ಲಿ ಮಹಮ್ಮದ್ ನಿಸಾರ್ ಎಂಬ ಹೆಸರಿದ್ದ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ನೋಡಿದ್ದ ಯುವಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶ್ರೀಗಳನ್ನು ವಿಚಾರಿಸಿದಾಗ ನಾನು ಅನ್ಯ ಧರ್ಮವನಾದರೂ ಬಸವ ತತ್ವದಿಂದ ಆಕರ್ಷಿತನಾಗಿ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅನ್ಯ ಧರ್ಮದಿಂದ ಮತಾಂತರವಾದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದ ಕಾರಣಕ್ಕೆ ನೀವು ಪೀಠಾಧಿಪತಿಯಾಗಿ ಇರುವುದು ಬೇಡ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು.

ಮಾಹಿತಿ ತಿಳಿದ ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಜಯಕುಮಾರ್ ಮತ್ತು ಸಿಬ್ಬಂದಿ ಆ.3ರಂದು ಗ್ರಾಮಕ್ಕೆ ತೆರಳಿ ಶ್ರೀಗಳು ಮತ್ತು ಗ್ರಾಮಸ್ಥರ ಅಭಿಪ್ರಾಯ ಪಡೆದರು. ನಂತರ ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ಪೀಠ ತ್ಯಾಗ ಮಾಡಲು ಸಿದ್ದನಿರುವುದಾಗಿ ಶ್ರೀಗಳು ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಸ್ವಾಮೀಜಿ ತಂದಿದ್ದ ಬೈಕ್ ಮತ್ತು ಇತರೆ ಅಗತ್ಯ ವಸ್ತುಗಳೊಂದಿಗೆ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು.

ಗ್ರಾಮಸ್ಥರ ಬೇಸರ:

ಆಸ್ಟ್ರೇಲಿಯಾದಲ್ಲಿರುವ ಗ್ರಾಮದ ಮಹದೇವಪ್ರಸಾದ್ ಎಂಬುವರು ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಮೇಲಿನ ಅಭಿಮಾನಕ್ಕೆ ತಮ್ಮದೇ ಜಾಗ ಮತ್ತು ಖರ್ಚಿನಲ್ಲಿ ಮಠದ ಕಟ್ಟಡ ನಿರ್ಮಿಸಿದ್ದರು. ವರ್ಷದ ಹಿಂದೆ ಗ್ರಾಮಸ್ಥರು ಮುಂದೆ ನಿಂತು ಮಠದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿದ್ದರು. ನಂತರ ಅಕ್ಕಮಹದೇವಿ ಮಾತಾಜಿ ಎಂಬುವರು ಪೀಠಾಧಿಪತಿಯಾಗಿ ಬಂದಿದ್ದರು. ಕಾರಣಾಂತರದಿಂದ ಅವರು ಪೀಠ ತ್ಯಾಗ ಮಾಡಿ ತೆರಳಿದ್ದರು. ನಂತರ ನಿಜಲಿಂಗಸ್ವಾಮೀಜಿ ಪೀಠಾಧಿಪತಿಯಾಗಿ ಬಂದಿದ್ದರು. ಈಗ ಅನ್ಯ ಧರ್ಮದವರು ಎಂಬ ಕಾರಣಕ್ಕೆ ಇವರು ಪೀಠ ತ್ಯಾಗ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತು ದಾನಿ ಬೇಸರಗೊಂಡಿದ್ದಾರೆ.

ಮಹಮ್ಮದ್ ನಿಸಾರ್ ಲಿಂಗದೀಕ್ಷೆ ಪಡೆದ ಬಗ್ಗೆ ಮತ್ತು ಧಾರ್ಮಿಕ ಸಮಾರಂಭವೊಂದರಲ್ಲಿ ಶ್ರೀಗಳೊಂದಿಗೆ ವೇದಿಕೆ ಹಂಚಿಕೊಂಡಿರುವ ಮತ್ತು ಪೂರ್ವಾಶ್ರಮದ ದಾಖಲೆಗಳು ಲಭ್ಯವಾಗಿವೆ.

Exit mobile version