ನಕಲಿ ಅಭ್ಯರ್ಥಿ ಪತ್ತೆ: ಸಿಇಟಿ ಪರೀಕ್ಷೆಯಲ್ಲಿ ಫಾತೀಮಾ ಪರಾರಿ

123 (12)

ಬೆಂಗಳೂರು: ಸಿಇಟಿ ಪರೀಕ್ಷೆಯ ಎರಡನೇ ದಿನ, ಬೆಂಗಳೂರಿನ ಮಲ್ಲೇಶ್ವರದ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೊನೇ ಕ್ಷಣದಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಯತ್ನಿಸಿದ ಮಹಿಳಾ ಅಭ್ಯರ್ಥಿಯೊಬ್ಬಳು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಆಪ್‌ನಿಂದ ನಕಲಿ ಎಂದು ಪತ್ತೆಯಾಗಿದ್ದಾಳೆ. ಈ ವಿಷಯವನ್ನು ಸಿಬ್ಬಂದಿ ಉನ್ನತ ಅಧಿಕಾರಿಗಳಿಗೆ ತಿಳಿಸುವ ಮೊದಲೇ ಆಕೆ ಪರಾರಿಯಾಗಿದ್ದಾಳೆ.

ಗುರುವಾರ ಬೆಳಗ್ಗೆ ಗಣಿತ ವಿಷಯದ ಪರೀಕ್ಷೆಗೆ ತುಬಾ ಫಾತೀಮಾ ಜಮೀಲ್ ಎಂಬಾಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾಳೆ. ಆದರೆ, ನೇರವಾಗಿ ಶೌಚಗೃಹಕ್ಕೆ ತೆರಳಿ ಸುಮಾರು ಒಂದು ಗಂಟೆಯಾದರೂ ಹೊರಬಂದಿರಲಿಲ್ಲ. ಪರೀಕ್ಷೆ ಆರಂಭವಾಗುವ ಸಮಯಕ್ಕೆ ಹೊರಬಂದು, ಕ್ಯೂಆರ್ ಕೋಡ್ ಒಳಗೊಂಡ ಪ್ರವೇಶ ಪತ್ರ ತೋರಿಸಿ ಒಳಗೆ ಪ್ರವೇಶಿಸಲು ಯತ್ನಿಸಿದ್ದಾಳೆ. ಈ ವೇಳೆ, ಮುಖ ಚಹರೆ ಪತ್ತೆ ಆಪ್‌ನಲ್ಲಿ ಆಕೆಯ ಭಾವಚಿತ್ರವನ್ನು ತೆಗೆದಾಗ, ಆಕೆ ನಕಲಿ ಅಭ್ಯರ್ಥಿ ಎಂದು ದೃಢಪಟ್ಟಿದೆ.

ತಕ್ಷಣವೇ ಸಿಬ್ಬಂದಿ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರಲು ಮುಂದಾದಾಗ, ಆಕೆ ಪರೀಕ್ಷಾ ಕೇಂದ್ರದಿಂದ ತಪ್ಪಿಸಿಕೊಂಡು ಓಡಿದ್ದಾಳೆ. ತನಿಖೆಯಲ್ಲಿ, ಆಕೆ ಟಬು ನಾಝ್ ಎಂಬ ನೈಜ ಅಭ್ಯರ್ಥಿಯ ಪ್ರವೇಶ ಪತ್ರಕ್ಕೆ ತನ್ನ ಫೋಟೋ ಅಂಟಿಸಿಕೊಂಡಿದ್ದಳು ಎಂಬುದು ತಿಳಿದುಬಂದಿದೆ. ಅಲ್ಲದೆ, ಪರೀಕ್ಷೆಯ ದಿನಾಂಕಗಳನ್ನೂ ತಪ್ಪಾಗಿ ನಮೂದಿಸಿದ್ದಳು.

ಕಾನೂನು ಕ್ರಮಕ್ಕೆ ಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಘಟನೆಯ ಬಗ್ಗೆ ತೀವ್ರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ. ಕಾಲೇಜಿನ ಪ್ರಾಂಶುಪಾಲರಿಗೆ ವಿಡಿಯೋ ದೃಶ್ಯ ಸಮೇತ ವರದಿ ಸಲ್ಲಿಸಲು ಸೂಚಿಸಲಾಗಿದೆ. “ಈ ಘಟನೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಆಪ್‌ನ ಪರಿಣಾಮಕಾರಿತ್ವ

ಕೆಇಎ ಆರಂಭಿಸಿರುವ ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಆಪ್ ನಕಲಿ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. “ಈ ಹೊಸ ವ್ಯವಸ್ಥೆ ಪರೀಕ್ಷೆಯ ಪಾರದರ್ಶಕತೆ ಮತ್ತು ನೈಜತೆಯನ್ನು ಕಾಪಾಡಲು ಅತ್ಯಂತ ಸಹಕಾರಿಯಾಗಿದೆ,” ಎಂದು ಪ್ರಸನ್ನ ಹೇಳಿದ್ದಾರೆ. ಈ ಘಟನೆಯನ್ನು ಬಿಟ್ಟರೆ, ರಾಜ್ಯಾದ್ಯಂತ ಪರೀಕ್ಷೆ ಸುಗಮವಾಗಿ ಮುಕ್ತಾಯಗೊಂಡಿದೆ.

ಅಧಿಕಾರಿಗಳ ಖುದ್ದು ತಪಾಸಣೆ

ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮತ್ತು ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಗುರುವಾರ ಭೇಟಿ ನೀಡಿದ್ದರು. ಇಬ್ಬರೂ ಅಧಿಕಾರಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಅಭ್ಯರ್ಥಿಗಳ ಭಾವಚಿತ್ರಗಳನ್ನು ತೆಗೆದು ನೈಜತೆಯನ್ನು ಖಾತ್ರಿಪಡಿಸಿಕೊಂಡರು.

Exit mobile version