ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಹೊಣೆ: ಈಶ್ವರ ಖಂಡ್ರೆ

Siddu stalin kcr (78)

ಅಗತ್ಯ ಮತ್ತು ದಿನಬಳಕೆ ವಸ್ತುಗಳ ದರ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೀದರ್ ನಲ್ಲಿ ಇಂದು(ಏಪ್ರಿಲ್10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕಡಿಮೆ ಇದ್ದಾಗ್ಯೂ, ಕೇಂದ್ರ ಬಿಜೆಪಿ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡಿದ್ದು ಇದರ ಪರಿಣಾಮವಾಗಿ ಎಲ್ಲಾ ಅಗತ್ಯವಸ್ತುಗಳ ದರದಲ್ಲಿ ಹೆಚ್ಚಳವಾಗಿದೆ. ಈಗ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಗಳ ದರವನ್ನೂ 50 ರೂ. ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು.

ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಯಾವುದೇ ಅರ್ಥವಿಲ್ಲ. ಅವರಿಗೆ ಮಾಡಲು ಕೆಲಸವಿಲ್ಲ ಹೀಗಾಗಿ ಜನರಲ್ಲಿ ಗೊಂದಲ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡುವುದಿದ್ದರೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ, ನಾವೂ ಬೆಂಬಲ ಕೊಡುತ್ತೇವೆ ಎಂದರು.

ರಾಯರೆಡ್ಡಿ ಬಾಯಿತಪ್ಪಿ ಹೇಳಿಕೆ ಕೊಟ್ಟಿರಬೇಕು
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಅತಿರೇಕದ ಮಟ್ಟ ತಲುಪಿತ್ತು. ಬಹುಶಃ ಬಸವರಾಜ ರಾಯರೆಡ್ಡಿ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಭ್ರಷ್ಟಾಚಾರದಲ್ಲಿ ನಂ.1 ಆಗಿತ್ತು ಎಂದು ಹೇಳಲು ಹೋಗಿ ಬಾಯಿತಪ್ಪಿ ಈ ಹೇಳಿಕೆ ನೀಡಿರಬೇಕು ಎಂದರು.

ಗಣಿ ನವೀಕರಣ ಸುಳ್ಳು ಆರೋಪ
ಗಣಿ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪವನ್ನು ಬಿಜೆಪಿ ಮಾಡುತ್ತಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಿಗಿಲಾಗಿ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ರಾಜ್ಯಪಾಲರಿರುವ, ರಾಜಭವನ ನಿಷ್ಪಕ್ಷಪಾತವಾದ ಕೇಂದ್ರವಾಗಿರಬೇಕು. ಅದು ಬಿಜೆಪಿ ಕಚೇರಿ ಆಗಬಾರದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

Exit mobile version