ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ನಡೆದ ಮದಗಜಗಳ ಕಾದಾಟದಲ್ಲಿ ದೊಡ್ಡ ದುರಂತ ಸಂಭವಿಸಿದೆ. ಮಾರ್ತಾಂಡ ಎಂಬ ಆನೆ ಗುರುವಾರ ತೀವ್ರ ಗಾಯಗಳಿಂದ ಸಾವನ್ನಪ್ಪಿದೆ. ಇದೇ ಕಾದಾಟದಲ್ಲಿ ಸಿಲುಕಿ ಚೆನ್ನೈ ಮೂಲದ ಒಬ್ಬ ಮಹಿಳೆಯೂ ಪ್ರಾಣ ಕಳೆದುಕೊಂಡಿದ್ದಾಳೆ.
ಘಟನೆ ವಿವರ :
ನಿನ್ನೆ (ಮೇ 18) ದುಬಾರೆಯಲ್ಲಿ ಮಾರ್ತಾಂಡ ಮತ್ತು ಕಂಜನ್ ಎಂಬ ಎರಡು ಆನೆಗಳ ನಡುವೆ ತೀವ್ರ ಕಾದಾಟ ನಡೆದಿತ್ತು. ಈ ಸಮಯದಲ್ಲಿ ಮಾರ್ತಾಂಡಕ್ಕೆ ಕಿವಿ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ತೀವ್ರ ಚಿಕಿತ್ಸೆ ನೀಡಿದರೂ ಇಂದು ಬೆಳಗ್ಗೆ ಮಾರ್ತಾಂಡ ಸಾವನ್ನಪ್ಪಿದೆ.
ಇದೇ ಕಾದಾಟದ ಸಮಯದಲ್ಲಿ ಅಲ್ಲಿ ಇದ್ದ ಚೆನ್ನೈ ಮೂಲದ ಮಹಿಳೆ ಆನೆಗಳ ನಡುವಿನ ಗುದ್ದಾಟಿಗೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ದುಬಾರೆ ಆನೆ ಶಿಬಿರ ಪ್ರವೇಶಕ್ಕೆ ನಿರ್ಬಂಧ :
ಈ ದುರಂತದ ಹಿನ್ನೆಲೆಯಲ್ಲಿ ದುಬಾರೆ ಆನೆ ಶಿಬಿರವನ್ನು 2 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಆನೆಗಳ ನಡುವಿನ ಕಾದಾಟ ದುಬಾರೆಯಲ್ಲಿ ಆಗಾಗ್ಗೆ ನಡೆಯುತ್ತಿದ್ದರೂ, ಈ ಬಾರಿ ಮನುಷ್ಯರ ಸಾವು ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳು ಆನೆಗಳ ವರ್ತನೆ ಮತ್ತು ಪ್ರವಾಸಿಗರ ಸುರಕ್ಷತಾ ಕ್ರಮಗಳ ಬಗ್ಗೆ ಪುನರ್ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಈ ಘಟನೆಯು ವನ್ಯಜೀವಿ ಪ್ರವಾಸೋದ್ಯಮದಲ್ಲಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸಂದೇಶವನ್ನು ನೀಡಿದೆ.
