ಉಡುಪಿ: “ಬಿಜೆಪಿ ಮತ್ತು ಜೆಡಿಎಸ್‌ನವರು ಜನರ ಬದುಕಿನ ಸಮಸ್ಯೆಗಳ ಬಗ್ಗೆ ಗಮನ ಕೊಡದೆ, ಧರ್ಮ ಮತ್ತು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು (ಆಗಸ್ಟ್ 30) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆಶಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್‌ನ ರಾಜಕೀಯ ತಂತ್ರಗಾರಿಕೆಯನ್ನು ಟೀಕಿಸಿದರು.
ಧರ್ಮಸ್ಥಳದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮಾವೇಶದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಧರ್ಮ ಮತ್ತು ಭಾವನೆಗಳನ್ನು ಬಳಸಿಕೊಂಡು ರಾಜಕಾರಣ ಮಾಡುವುದೇ ಅವರ ಗುರಿ” ಎಂದು ಆರೋಪಿಸಿದರು.
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿಯ ಉದ್ದೇಶವೇನು ಎಂದು ಕೇಳಿದಾಗ, ಶಿವಕುಮಾರ್ ಚಟಾಕಿಯ ಉತ್ತರ ನೀಡಿದರು. “ಕೃಷ್ಣ, ಗಣಪತಿ ಮತ್ತು ನಿಮ್ಮ (ಮಾಧ್ಯಮಗಳ) ಆಶೀರ್ವಾದ ಪಡೆಯಲು ಬಂದಿದ್ದೇನೆ. ಎಲ್ಲರ ಆಶೀರ್ವಾದವೂ ನನಗೆ ಬೇಕು” ಎಂದು ನಗುತ್ತಾ ಹೇಳಿದರು.
‘ಸೆಪ್ಟೆಂಬರ್ ಕ್ರಾಂತಿ’ ಚರ್ಚೆಯ ಬಗ್ಗೆ ಕೇಳಿದಾಗ, “ಪ್ರಾರ್ಥನೆ ನನ್ನ ಸಹಜ ಸ್ವಭಾವ. ಉಡುಪಿ ಕೃಷ್ಣಮಠದಿಂದ ಈ ಹಿಂದೆಯೂ ಆಹ್ವಾನ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಆಹ್ವಾನಿಸಿದ್ದರು. ಆದರೆ, ಆಗ ಬರಲು ಸಾಧ್ಯವಾಗಿರಲಿಲ್ಲ. ಈಗ ಇಲ್ಲಿಗೆ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದರು.