ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲಗಳ ಸಮಗ್ರ ಮತ್ತು ಪಾರದರ್ಶಕ ನಿರ್ವಹಣೆಗಾಗಿ ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ‘ಡಿಜಿಟಲ್ ವಾಟರ್ ಸ್ಟಾಕ್’ (DWS) ಎಂಬ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವೇದಿಕೆಯನ್ನು ಜಾರಿಗೊಳಿಸುವ ಚಿಂತನೆಯಲ್ಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.
ಈ ಯೋಜನೆಯು ಉಪಗ್ರಹ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದ ಕೆರೆಗಳು, ಸರೋವರಗಳು ಮತ್ತು ಭೂಗರ್ಭ ಜಲಧಾರೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಗುರಿಯನ್ನು ಹೊಂದಿದೆ.
ಡಿಜಿಟಲ್ ವಾಟರ್ ಸ್ಟಾಕ್ ಎಂದರೇನು?
ಡಿಜಿಟಲ್ ವಾಟರ್ ಸ್ಟಾಕ್ ಎನ್ನುವುದು ಉಪಗ್ರಹ ಸೆನ್ಸರ್‌ಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನದ ಮೂಲಕ ವಿಶ್ಲೇಷಿಸುವ ಒಂದು ನವೀನ ವೇದಿಕೆಯಾಗಿದೆ. ಇದರಿಂದ ಜಲಮೂಲಗಳ ಕಳೆದ ಐದು ವರ್ಷಗಳ ದತ್ತಾಂಶವನ್ನು ಹೋಲಿಕೆ ಮಾಡಿ, ನೀರಿನ ಶೇಖರಣೆಯಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಗುರುತಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಯೋಜನೆಯು ನಗರೀಕರಣ ಮತ್ತು ಕೃಷಿ ಒತ್ತಡದಿಂದ ಉಂಟಾಗುವ ಜಲಮೂಲಗಳ ಕುಸಿತ, ಮಾಲಿನ್ಯ ಮತ್ತು ಅತಿಕ್ರಮಣವನ್ನು ಗುರುತಿಸಿ ತಕ್ಷಣದ ಕ್ರಮಕ್ಕೆ ಅನುವು ಮಾಡಿಕೊಡುತ್ತದೆ.
ಕರ್ನಾಟಕ ಟ್ಯಾಂಕ್ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ (KTCDA) ಪಾತ್ರ
ಕರ್ನಾಟಕ ಟ್ಯಾಂಕ್ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ರಾಜ್ಯದ 41,000ಕ್ಕೂ ಅಧಿಕ ಜಲಮೂಲಗಳ ಪೈಕಿ 34,000ಕ್ಕೂ ಹೆಚ್ಚು ಕೆರೆಗಳನ್ನು ಸಮೀಕ್ಷೆ ಮಾಡಿ, 31,000ಕ್ಕೂ ಅಧಿಕ ಕೆರೆಗಳಿಗೆ ಜಿಯೋಟ್ಯಾಗ್ ಮಾಡಲಾಗಿದೆ. ಇದರ ಜೊತೆಗೆ, 42,678 ಎಕರೆ ಅಕ್ರಮ ಅತಿಕ್ರಮಣವನ್ನು ಗುರುತಿಸಿ, 29,000 ಎಕರೆಯನ್ನು ತೆರವುಗೊಳಿಸಲಾಗಿದೆ. ಮೊದಲ ಹಂತದಲ್ಲಿ, ಅಂತರ್ಜಲದ ಅತಿಯಾದ ಬಳಕೆಯಿರುವ 41 ತಾಲೂಕುಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಮಾಸ್ಟರ್ ವಾಟರ್ ಅಟ್ಲಾಸ್ ಮತ್ತು ಡ್ಯಾಶ್‌ಬೋರ್ಡ್
ಡಿಜಿಟಲ್ ವಾಟರ್ ಸ್ಟಾಕ್ ಮೂಲಕ ರಾಜ್ಯಮಟ್ಟದ ನೀರಿನ ನಿರ್ವಹಣೆಗಾಗಿ ಒಂದು ಡ್ಯಾಶ್‌ಬೋರ್ಡ್ ಮತ್ತು “ಮಾಸ್ಟರ್ ವಾಟರ್ ಅಟ್ಲಾಸ್” ರಚಿಸಲಾಗುವುದು. ಇದು ಅಂತರ್ಜಲದ ಮಟ್ಟ, ಮಳೆಯ ಪ್ರಮಾಣ, ಮೇಲ್ಮೈ ಹರಿವು, ನೀರಿನ ಬಳಕೆ ಮತ್ತು ಗುಣಮಟ್ಟದ ದತ್ತಾಂಶವನ್ನು ಸಂಗ್ರಹಿಸಿ, ಜಲಮೂಲಗಳ ಸ್ಥಿತಿಯನ್ನು ನಿಖರವಾಗಿ ನಿರ್ವಹಿಸಲು ಸಹಾಯಕವಾಗಲಿದೆ. ಇದರಿಂದ ವಿವಿಧ ಇಲಾಖೆಗಳಲ್ಲಿ ಹಂಚಿಹೋಗಿರುವ ಜಲಮೂಲ ದತ್ತಾಂಶವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಲಾಗುವುದು.
ರಾಜ್ಯದ ಜಲಮೂಲಗಳನ್ನು ನೈಸರ್ಗಿಕ ಉಳಿತಾಯ ಖಾತೆಗಳಂತೆ ಪರಿವರ್ತಿಸಲು ಮತ್ತು ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಈ ಯೋಜನೆಯು ರಾಜ್ಯದ ಜಲ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವ ಎನ್.ಎಸ್. ಭೋಸರಾಜು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
