ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಬ್ಲ್ಯಾಕ್‌ಮೇಲ್ ಮಾಡಿ ಹಿಂದೂ ಯುವತಿ ಮೇಲೆ ಅತ್ಯಾಚಾರ ಆರೋಪ

Untitled design (45)

ಹುಬ್ಬಳ್ಳಿ: ಜಿಮ್ ಟ್ರೇನರ್ ಸಮೀರ್ ಮುಲ್ಲಾ ಪ್ರಕರಣದ ಬೆನ್ನಲ್ಲೇ, ಇದೀಗ ಮುಫೀಸ್ ಮಿಯಾನ್ನವರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಆಕೆಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಮುಫೀಸ್ ಮಿಯಾನ್ನವರ್ ಸಂತ್ರಸ್ತ ಯುವತಿಯನ್ನು ಪ್ರೀತಿಸುವ ನಾಟಕವಾಡಿ ನಂಬಿಸಿದ್ದ. ಈ ಅವಧಿಯಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಕೆಲವು ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದ ಎನ್ನಲಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಈತ ಯುವತಿಯನ್ನು ಧಾರವಾಡದಲ್ಲಿ ರಿಜಿಸ್ಟರ್‌ ಮದುವೆಯಾಗಲು (Register Marriage) ಸಿದ್ಧತೆ ನಡೆಸಿದ್ದ. ಆದರೆ, ಈ ವಿಷಯ ತಿಳಿದ ಯುವತಿಯ ಪೋಷಕರು ಮದುವೆಯನ್ನು ತಡೆದಿದ್ದರು.

ಮದುವೆ ಮುರಿದುಬಿದ್ದ ನಂತರವೂ ಮುಫೀಸ್, ಯುವತಿಯ ಬಳಿ ಇದ್ದ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲು ಶುರು ಮಾಡಿದ್ದ. ಯುವತಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯವನ್ನ ನೋಡಿ ಮನೆಗೆ ನುಗ್ಗಿದ ಆರೋಪಿ, ವಿಡಿಯೋ ವೈರಲ್ ಮಾಡುವ ಬೆದರಿಕೆ ಒಡ್ಡಿ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ಹುಬ್ಬಳ್ಳಿಯ ಜಿಮ್ ಟ್ರೇನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣ ಭಾರಿ ಸುದ್ದಿಯಾಗುತ್ತಿದ್ದಂತೆ, ಸಂತ್ರಸ್ತ ಯುವತಿ ಹಿಂದೂ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದ್ದಾಳೆ. ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪೊಲೀಸರು ಆರೋಪಿ ಮುಫೀಸ್ ಮಿಯಾನ್ನವರ್ ವಿರುದ್ಧ ಅತ್ಯಾಚಾರ (Rape), ಬ್ಲ್ಯಾಕ್‌ಮೇಲ್ ಮತ್ತು ಜೀವ ಬೆದರಿಕೆ ಸೇರಿದಂತೆ ವಿವಿಧ ಗಂಭೀರ ಕಲಂಗಳ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Exit mobile version