ಆನ್‌ಲೈನ್ ಕಿರಾಣಿ ವಿತರಣಾ ಸಂಸ್ಥೆಗಳಲ್ಲಿ ಒಂದಾದ ಬ್ಲಿಂಕಿಟ್ (Blinkit)ಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ. ‘ಬೈ ಒನ್-ಗೆಟ್ ಒನ್ ಫ್ರೀ’ (Buy One Get One Free) ಆಫರ್ ಘೋಷಿಸಿ, ಗ್ರಾಹಕರಿಗೆ ಒಂದು ಉತ್ಪನ್ನ ಮಾತ್ರ ವಿತರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಕೇವಲ 703 ರೂ. ಮೌಲ್ಯದ ವಸ್ತು ಪ್ರಕರಣಕ್ಕೆ ಒಟ್ಟು 35,000 ರೂ. ಪರಿಹಾರ ನೀಡುವಂತೆ ಆಯೋಗ ಆದೇಶಿಸಿದೆ.
ಧಾರವಾಡದ ಸಾರಸ್ವತಪುರ ಬಡಾವಣೆಯ ನಿವಾಸಿ ಹಾಗೂ ವಕೀಲೆ ಲಕ್ಷ್ಮಿ ಬಸವರಾಜ ನೇಗಿನಾಳ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಈಶಪ್ಪ ಭೂತೆ ಅವರ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ
2025ರ ಮೇ 20ರಂದು ಲಕ್ಷ್ಮಿ ಬಸವರಾಜ ನೇಗಿನಾಳ ಅವರು ತಮ್ಮ ಸಾಕು ನಾಯಿಗಾಗಿ ಬ್ಲಿಂಕಿಟ್ ಆ್ಯಪ್ ಮೂಲಕ 703 ರೂ. ಮೌಲ್ಯದ ‘ವಿಲ್ಡರ್‌ನೆಸ್ – ಚಿಕನ್ ಮತ್ತು ವೆಜಿಟೇಬಲ್’ ನಾಯಿ ಆಹಾರವನ್ನು ಆರ್ಡರ್ ಮಾಡಿದ್ದರು. ಆ ಸಮಯದಲ್ಲಿ ಆ ಉತ್ಪನ್ನದ ಮೇಲೆ ‘ಒಂದಕ್ಕೆ ಇನ್ನೊಂದು ಉಚಿತ’ (Buy One Get One Free) ಆಫರ್ ಜಾರಿಯಲ್ಲಿತ್ತು.
ಆದರೆ ಡೆಲಿವರಿ ವೇಳೆ ಕೇವಲ ಒಂದು ಪ್ಯಾಕೆಟ್ ಮಾತ್ರ ತಲುಪಿಸಲಾಗಿತ್ತು. ಈ ಕುರಿತು ಅವರು ಬ್ಲಿಂಕಿಟ್ ಗ್ರಾಹಕ ಸೇವಾ ಕೇಂದ್ರವನ್ನು ಹಲವು ಬಾರಿ ಸಂಪರ್ಕಿಸಿ ದೂರು ಸಲ್ಲಿಸಿದ್ದರೂ, ಯಾವುದೇ ಸಮರ್ಪಕ ಪರಿಹಾರ ಅಥವಾ ಸ್ಪಂದನೆ ದೊರೆತಿರಲಿಲ್ಲ. ಇದರಿಂದ ಬೇಸತ್ತ ಅವರು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
ಆಯೋಗದ ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ಆಯೋಗವು, ಬ್ಲಿಂಕಿಟ್ ಸೇವೆಯಲ್ಲಿ ಸ್ಪಷ್ಟ ಲೋಪ ಮತ್ತು ಗ್ರಾಹಕರಿಗೆ ಅನ್ಯಾಯವಾಗಿರುವುದನ್ನು ಪರಿಗಣಿಸಿ, ದೂರುದಾರರ ಪರವಾಗಿ ತೀರ್ಪು ನೀಡಿದೆ.
ಆಯೋಗದ ಆದೇಶದಂತೆ:
- 703 ರೂ. ಖರೀದಿ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು.
- ಮಾನಸಿಕ ಹಿಂಸೆ ಹಾಗೂ ಸೇವಾ ಲೋಪಕ್ಕಾಗಿ 25,000 ರೂ. ಪರಿಹಾರ ನೀಡಬೇಕು.
- ಪ್ರಕರಣದ ಕಾನೂನು ವೆಚ್ಚವಾಗಿ 10,000 ರೂ. ಪಾವತಿಸಬೇಕು.
ಈ ಮೂಲಕ ಒಟ್ಟು ಸುಮಾರು 35,000 ರೂ. ಮೊತ್ತವನ್ನು ದೂರುದಾರರಿಗೆ ಪಾವತಿಸುವಂತೆ ಬ್ಲಿಂಕಿಟ್‌ಗೆ ಆದೇಶಿಸಲಾಗಿದೆ.
ಈ ತೀರ್ಪು ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಮಹತ್ವದ ಉದಾಹರಣೆಯಾಗಿ ಪರಿಗಣಿಸಲಾಗುತ್ತಿದೆ. ಜಾಹೀರಾತುಗಳಲ್ಲಿ ನೀಡುವ ಆಫರ್‌ಗಳನ್ನು ಪ್ರಾಮಾಣಿಕವಾಗಿ ಪಾಲಿಸುವ ಜವಾಬ್ದಾರಿ ಕಂಪನಿಗಳ ಮೇಲಿದೆ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.
