ಧಾರವಾಡದಲ್ಲೂ ಜನಿವಾರ ವಿವಾದ: ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಕತ್ತರಿಸಿ ಕೈಗೆ ಕೊಟ್ಟ ಘಟನೆ

123 (61)

ಧಾರವಾಡದಲ್ಲೂ ಜನಿವಾರ ವಿವಾದ: ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಕತ್ತರಿಸಿ ಕೈಗೆ ಕೊಟ್ಟ ಘಟನೆ

ಧಾರವಾಡ: ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಜನಿವಾರ ವಿವಾದದ ಬಳಿಕ ಇದೀಗ ಧಾರವಾಡದಲ್ಲೂ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಕತ್ತರಿಸಿ ವಿದ್ಯಾರ್ಥಿಗೆ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಧಾರವಾಡ ಜಿಲ್ಲೆಯ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಧಾರವಾಡದ ಜೆಎಸ್ಎಸ್ (JSS) ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದರು. ಈ ವೇಳೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ತಪಾಸಣೆ ನಡೆಸುವಾಗ ಸಿಬ್ಬಂದಿಯೊಬ್ಬರು ನಂದನ್ ಹಾಕಿಕೊಂಡಿದ್ದ ಜನಿವಾರವನ್ನು ಗಮನಿಸಿದ್ದಾರೆ. ಜನಿವಾರವನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ತಡೆದಿದ್ದಾರೆ.

ವಿದ್ಯಾರ್ಥಿಯು ಜನಿವಾರವನ್ನು ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದ್ದರೂ, ಸಿಬ್ಬಂದಿ ಅದಕ್ಕೂ ಅವಕಾಶ ನೀಡದೆ, ಸಮಯವಿಲ್ಲ ಎಂದು ಜನಿವಾರವನ್ನು ಕತ್ತರಿಸಿ ಕೈಗೆ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ಎರಡು ದಿನಗಳಿಂದ ಶಿವಮೊಗ್ಗ ಮತ್ತು ಬೀದರ್‌ನ ಜನಿವಾರ ವಿವಾದದ ಸುದ್ದಿಗಳನ್ನು ಗಮನಿಸಿದ್ದ ನಂದನ್, ಈ ಘಟನೆಯ ಬಗ್ಗೆ ತನ್ನ ತಂದೆಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಂದೆ, ಈ ಘಟನೆಯಿಂದಾಗಿ ಮಗನಿಗೆ ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ್ ಲಾಡ್, ಇಂತಹ ಘಟನೆಗಳ ಬಗ್ಗೆ ಲಿಖಿತ ದೂರು ಸಲ್ಲಿಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರು ಸರ್ಕಾರಿ ಅಧಿಕಾರಿಗಳೇ ಅಥವಾ ಖಾಸಗಿ ಉದ್ಯೋಗಿಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಸಮಸ್ಯೆಯನ್ನು ಬಗೆಹರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

 

Exit mobile version