ಧರ್ಮಸ್ಥಳ ಬಳಿ ನೂರಾರು ಹೆಣಗಳನ್ನು ಹೂತ ಪ್ರಕರಣದಲ್ಲಿ ಅನಾಮಿಕ ಗಂಭೀರ ಆರೋಪ ಮಾಡಿದ್ದಾನೆ. ಧರ್ಮಸ್ಥಳದಲ್ಲಿ ಮಾಜಿ ಸ್ವಚ್ಛತಾ ಕಾರ್ಮಿಕನೊಬ್ಬ (ಅನಾಮಿಕ) ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿದ ಆತ ನೂರಾರು ಗುರುತಿಲ್ಲದ ಶವಗಳನ್ನು ಕಾಡು ಪ್ರದೇಶಗಳಲ್ಲಿ ಸಮಾಧಿ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ.
48 ವರ್ಷದ ಈ ಅನಾಮಿಕ, 1995 ರಿಂದ 2014 ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ. ಅನಾಮಿಕನ ಪ್ರಕಾರ, ತಾನು ಮತ್ತು ನಾಲ್ಕು ಜನರ ತಂಡವು ಗುರುತಿಲ್ಲದ ಶವಗಳನ್ನು ದಾಖಲೆರಹಿತವಾಗಿ ಕಾಡು ಪ್ರದೇಶಗಳು, ಹಳೆಯ ರಸ್ತೆಗಳು ಮತ್ತು ನೇತ್ರಾವತಿ ನದಿಯ ತೀರದಲ್ಲಿ ಸಮಾಧಿ ಮಾಡಿದ್ದೇವೆ ಎಂದು ಹೇಳಿದ್ದಾನೆ.
ಅನಾಮಿಕನ ತಂಡವು ಬಾಹುಬಲಿ ಬೆಟ್ಟದಲ್ಲಿ ಒಬ್ಬ ಮಹಿಳೆಯ ಶವವನ್ನು ಮತ್ತು ನೇತ್ರಾವತಿ ಸ್ನಾನ ಘಟ್ಟದಲ್ಲಿ ಸುಮಾರು 70 ರಿಂದ 80 ಶವಗಳನ್ನು ಸಮಾಧಿ ಮಾಡಿದ್ದೇವೆ ಎಂದು ಅನಾಮಿಕ ಆರೋಪಿಸಿದ್ದಾನೆ. “ಸ್ಥಳೀಯರು ಕೆಲವೊಮ್ಮೆ ಈ ಸಮಾಧಿಗಳನ್ನು ನೋಡಿದ್ದರು, ಆದರೆ ಅವರು ಗಮನ ಕೊಡಲಿಲ್ಲ. ಆದೇಶ ಬಂದರೆ, ನಾವು ಶವಗಳನ್ನು ಸಮಾಧಿ ಮಾಡುತ್ತಿದ್ದೆವು. ಅದು ನಮ್ಮ ಕೆಲಸವಾಗಿತ್ತು,” ಎಂದು ಆತ ತಿಳಿಸಿದ್ದಾನೆ.
ಅನಾಮಿಕನ ಹೇಳಿಕೆ ಪ್ರಕಾರ, ತಾನು ಸಮಾಧಿ ಮಾಡಿದ ಸುಮಾರು 100 ಶವಗಳಲ್ಲಿ 90 ಶವಗಳು ಮಹಿಳೆಯರದ್ದಾಗಿದ್ದವು ಮತ್ತು ಅನೇಕ ಶವಗಳ ಮೇಲೆ ಹಿಂಸೆ ಮತ್ತು ಸಂಭವನೀಯ ಲೈಂಗಿಕ ದೌರ್ಜನ್ಯದ ಗುರುತುಗಳಿದ್ದವು. “ಕೆಲವು ಶವಗಳ ಮೇಲೆ ಸ್ಪಷ್ಟವಾದ ಗಾಯದ ಗುರುತುಗಳಿದ್ದವು. ಕೆಲವು ದೌರ್ಜನ್ಯಕ್ಕೊಳಗಾದಂತೆ ಕಾಣುತ್ತಿದ್ದವು,” ಎಂದು ಆತ ಹೇಳಿದ್ದಾನೆ. ಆದರೆ, ಲೈಂಗಿಕ ದೌರ್ಜನ್ಯವನ್ನು ವೈದ್ಯಕೀಯ ತಜ್ಞರಿಂದ ಮಾತ್ರ ದೃಢೀಕರಿಸಬಹುದು ಎಂದು ಆತ ಸ್ಪಷ್ಟಪಡಿಸಿದ್ದಾನೆ. ಶವಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗಿನವರಿದ್ದರು ಎಂದು ಅನಾಮಿಕ ತಿಳಿಸಿದ್ದಾನೆ.
ಸೌಜನ್ಯ ಹತ್ಯೆ ಪ್ರಕರಣದ ಉಲ್ಲೇಖ:
2012ರಲ್ಲಿ ಧರ್ಮಸ್ಥಳದ ಸಮೀಪದ ಒಂಟಿಯಾದ ಪ್ರದೇಶದಲ್ಲಿ 17 ವರ್ಷದ ಸೌಜನ್ಯ ಎಂಬ ಬಾಲಕಿಯ ಹತ್ಯೆಯಾದ ಘಟನೆಯ ಬಗ್ಗೆಯೂ ಅನಾಮಿಕ ಮಾತನಾಡಿದ್ದಾನೆ. “ಸೌಜನ್ಯನ ಹತ್ಯೆಯಾದ ರಾತ್ರಿ ನಾನು ಎಲ್ಲಿದ್ದೆ ಎಂದು ಕರೆ ಮಾಡಿ ಕೇಳಿದರು. ನಾನು ರಜೆಯಲ್ಲಿದ್ದು, ನನ್ನ ಊರಿನಲ್ಲಿದ್ದೆ ಎಂದು ತಿಳಿಸಿದೆ. ರಜೆಯಲ್ಲಿರುವುದಕ್ಕೆ ಅವರು ನನ್ನ ಮೇಲೆ ಕೂಗಾಡಿದರು. ಮರುದಿನ ನಾನು ಆ ಹತ್ಯೆಯಾದ ಬಾಲಕಿಯ ಶವವನ್ನು ನೋಡಿದೆ,” ಎಂದು ಅನಾಮಿಕ ನೆನಪಿಸಿಕೊಂಡಿದ್ದಾನೆ.
ಅನಾಮಿಕನ ಪ್ರಕಾರ, ಕೆಲವು ಸಮಾಧಿ ಸ್ಥಳಗಳು ಈಗ ಗುರುತಿಸಲಾಗದಂತಾಗಿವೆ. “ಹಿಂದೆ ಒಂದು ಹಳೆಯ ರಸ್ತೆ ಇತ್ತು, ಅದನ್ನು ಗುರುತಿಸಬಹುದಿತ್ತು. ಆದರೆ ಜೆಸಿಬಿ ಕೆಲಸದ ನಂತರ ಕೆಲವು ಸ್ಥಳಗಳನ್ನು ಗುರುತಿಸಲು ಸಾಧ್ಯವಿಲ್ಲ. ಕಾಡು ಹಿಂದೆ ತೆಳ್ಳಗಿತ್ತು, ಈಗ ದಟ್ಟವಾಗಿದೆ,” ಎಂದು ಅನಾಮಿಕ ಹೇಳಿದ್ದಾನೆ. ಮಳೆ, ಕಾಡಿನ ಬೆಳವಣಿಗೆ, ಮತ್ತು ರಸ್ತೆ ಕಾಮಗಾರಿಗಳಿಂದ ಕೆಲವು ಸಾಕ್ಷ್ಯಗಳು ನಾಶವಾಗಿವೆ ಎಂದು ಅನಾಮಿಕ ಆರೋಪಿಸಿದ್ದಾನೆ.