ಇವತ್ತಾದ್ರೂ ಸಿಗುತ್ತಾ ಅಸ್ಥಿಪಂಜರ..? ಅಸ್ಥಿಪಂಜರ ಸಿಗದಿದ್ದರೆ ಮುಂದೇನು..? ಅನಾಮಿಕನಿಗೆ ಫುಲ್ ಟೆನ್ಷನ್​

Untitled design

ಧರ್ಮಸ್ಥಳದಲ್ಲಿ ಅಕ್ರಮವಾಗಿ ಹೆಣಗಳನ್ನು ಹೂಳಲಾಗಿದೆ ಎನ್ನುವ ಆರೋಪ ಸಂಚಲನ ಮೂಡಿಸಿದ್ದು, ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೆತ್ತಿಕೊಂಡಿದೆ. ಅನಾಮಿಕ ವ್ಯಕ್ತಿಯೊಬ್ಬ ಗುರುತಿಸಿದ 13 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದರಲ್ಲಿ 6ನೇ ಸ್ಥಳದಲ್ಲಿ ಕೆಲವು ಅಸ್ಥಿಪಂಜರ ತುಣುಕುಗಳು ಮತ್ತು 11ನೇ ಸ್ಥಳದ ಬಳಿ ಮೂಳೆಗಳು, ಸೀರೆ ಸೇರಿದಂತೆ ವಸ್ತುಗಳು ಸಿಕ್ಕಿವೆ. ಆದರೆ, 13ನೇ ಸ್ಥಳದಲ್ಲಿ ಇದುವರೆಗೆ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿಲ್ಲ.

ಎಸ್‌ಐಟಿ ತಂಡವು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಬಳಸಿ 13ನೇ ಸ್ಥಳದಲ್ಲಿ ಆಗಸ್ಟ್ 12ರಂದು ಶೋಧಕಾರ್ಯ ನಡೆಸಿತ್ತು. ಆದರೆ, ಈ ದಿನವೂ ಯಾವುದೇ ಅಸ್ಥಿಪಂಜರ ಸಿಗದಿದ್ದರೆ, ಶೋಧ ಕಾರ್ಯಕ್ಕೆ ವಿರಾಮ ನೀಡುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ಸ್ಥಳದಲ್ಲಿ 18 ಅಡಿ ಆಳ ಮತ್ತು 25 ಅಡಿ ಅಗಲದಲ್ಲಿ 20 ಟನ್‌ಗಿಂತಲೂ ಹೆಚ್ಚು ಮಣ್ಣನ್ನು ತೆಗೆದು ತಪಾಸಣೆ ಮಾಡಲಾಗಿದೆ.

ತನಿಖೆಯ ಹಿನ್ನೆಲೆ
ಈ ಪ್ರಕರಣವು ಜುಲೈ 2025ರಲ್ಲಿ ಅನಾಮಿಕ ದೂರಿನಿಂದ ಆರಂಭವಾಯಿತು. 1998ರಿಂದ 2014ರವರೆಗೆ ಧರ್ಮಸ್ಥಳದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಮತ್ತು ಬಡವರ ಶವಗಳನ್ನು ಬಲವಂತವಾಗಿ ಹೂಡಲಾಗಿದೆ ಎಂದು ಆತ ಆರೋಪಿಸಿದ್ದಾನೆ. ಈ ಆರೋಪದ ಆಧಾರದ ಮೇಲೆ ಎಸ್‌ಐಟಿ 13 ಸ್ಥಳಗಳನ್ನು ಗುರುತಿಸಿ ಉತ್ಖನನ ಕಾರ್ಯ ಆರಂಭಿಸಿತು. ಈವರೆಗೆ 6ನೇ ಸ್ಥಳದಲ್ಲಿ ಪುರುಷನೊಬ್ಬನ ಭಾಗಶಃ ಅಸ್ಥಿಪಂಜರ ಮತ್ತು 11ನೇ ಸ್ಥಳದ ಬಳಿ  ಮೂಳೆ ತುಣುಕುಗಳು ಸಿಕ್ಕಿವೆ. ಇವು ಫಾರೆನ್ಸಿಕ್ ತಪಾಸಣೆಗೆ ಕಳುಹಿಸಲಾಗಿದೆ.

ಮುಂದಿನ ಕ್ರಮ ಏನು?
13ನೇ ಸ್ಥಳದಲ್ಲಿ ಅಸ್ಥಿಪಂಜರ ಸಿಗದಿದ್ದರೆ, ಎಸ್‌ಐಟಿ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎನ್ನುವ ಊಹಾಪೋಹಗಳಿವೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಆದರೆ, ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಕ್ರಮವನ್ನು ತನಿಖೆಯ ಫಲಿತಾಂಶದ ಆಧಾರದ ಮೇಲೆ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

 

Exit mobile version