ಅನಾಮಿಕನನ್ನು ಗಲ್ಲಿಗೇರಿಸಿ: ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ಆಗ್ರಹ!

1 (41)

ಬೆಂಗಳೂರು: ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯೊಬ್ಬ ಸುಳ್ಳು ಆರೋಪ ಮಾಡಿದ್ದಾನೆ. ತನಿಖೆಯ ವರದಿಯಲ್ಲಿ ಆರೋಪಕ್ಕೆ ಸಂಬಂಧಪಟ್ಟ ಯಾವುದೇ ಕಳೆಬರಹಗಳು ಸಿಗದಿದ್ದರೆ, ಆ ವ್ಯಕ್ತಿಯನ್ನು ಗಲ್ಲಿಗೇರಿಸಬೇಕು ಎಂದು ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ.

ಇಂದು, ಬೆಂಗಳೂರಿನಲ್ಲಿ ಗ್ಯಾರಂಟಿ ನ್ಯೂಸ್‌ ಜೊತೆಗೆ ಮಾತನಾಡಿದ ಶಾಸಕ ಎಸ್‌ಆರ್ ವಿಶ್ವನಾಥ್, ಕಳೆದ ಒಂದು ವಾರದಿಂದ ಧರ್ಮಸ್ಥಳಕ್ಕೆ ಹೋಗಲು ತಯಾರಿ ನಡೆಸಿದ್ದೇವೆ. ಯಲಹಂಕ ವಿಧಾನಸಭಾ ಕ್ಷೇತ್ರದಿಂದ 400 ವಾಹನಗಳ ಮೂಲಕ ತೆರಳಲಿದ್ದೇವೆ. ಬೆಳಗ್ಗೆ 6 ಗಂಟೆಗೆ ನೆಲಮಂಗಲ ಟೋಲ್ ತಲುಪಲಿದ್ದೇವೆ. ಪ್ರತಿಯೊಂದು ವಾಹನಕ್ಕೂ ನಂಬರ್, ಭಗವದ್ಧ್ವಜ ಮತ್ತು ಕೇಸರಿ ಶಾಲು ನೀಡುತ್ತಿದ್ದೇವೆ. ನಾಳೆ ಮಧ್ಯಾಹ್ನ 3 ಗಂಟೆಗೆ ಧರ್ಮಸ್ಥಳ ತಲುಪಿ, ಸಂಜೆ ಮಂಜುನಾಥ ಸ್ವಾಮಿ ದರ್ಶನ ಮಾಡುತ್ತೇವೆ. ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ಸೇರಿದಂತೆ ಎಲ್ಲರೂ ಭಾನುವಾರ ಬರುತ್ತಾರೆ. ಎಲ್ಲರೂ ಕೂಡಿ ಸಂಕಲ್ಪ ಮಾಡಿ ಬರುತ್ತೇವೆ ಎಂದರು.

ಇದೇ ವೇಳೆ ಸದನದಲ್ಲಿ ಧರ್ಮಸ್ಥಳದ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂಜುನಾಥ ಸ್ವಾಮಿ ಪರವಾಗಿ ಇದ್ದಾರೆ ಎಂದು ಹೇಳಿದ್ದಾರೆ. ಧರ್ಮಸ್ಥಳದ ಮೇಲೆ ಅಪಪ್ರಚಾರ ಆಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಸರ್ಕಾರದ ಭಾಗವಾಗಿ ತನಿಖೆ ಹೇಗೆ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ನಾವು ಯಾವುದೇ ಆರೋಪ ಮಾಡಿರಲಿಲ್ಲ. ಎಷ್ಟು ಆಳ ತೆಗೆದರೂ ಏನೂ ಸಿಗದಿದ್ದರೆ ಈ ಚರ್ಚೆ ಎಲ್ಲರಿಗೂ ಗೊತ್ತಾಗುತ್ತದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ದಕ್ಷವಾಗಿದೆ. ಇದರಲ್ಲಿ ಸ್ಪಷ್ಟವಾಗಿ ಹುನ್ನಾರ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಬಿಜೆಪಿ ಮೊದಲಿಂದಲೂ ಇದರ ವಿರುದ್ಧ ಹೋರಾಡಿದ್ದು, ಇದೊಂದು ಟೂಲ್ ಕಿಟ್ ಎಂದು ಹೇಳಿದ್ದೆವು ಎಂದರು.

ನಾನೇ ನೂರು ಹೆಣ ಇದೆ ಅಂತ ಯಾರೇ ಬಂದಿದ್ರೂ ನಾವೂ ತನಿಖೆ ಮಾಡ್ತಿದ್ದೆವು. ಯಾಕೆಂದರೆ ಸತ್ಯ ಹೊರಬರಬೇಕಿತ್ತು, ಇಲ್ಲಿಯವರೆಗೆ ಬರೀ ಆರೋಪಗಳೇ ಇದ್ದವು. ಸೌಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಗಳು ಬಂದಿದ್ದರಿಂದ ಸಿಎಂ ಸಿದ್ದರಾಮಯ್ಯ ಎಸ್‌ಐಟಿ ರಚಿಸಿದ್ದಾರೆ. ಸಿದ್ದರಾಮಯ್ಯ ಅವರು ಈ ವಿಚಾರಕ್ಕೆ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಇದೀಗ ತನಿಖೆ ನಡೆಯುತ್ತಿದ್ದು, ಸತ್ಯ ಹೊರಬರಲಿ. ಆರೋಪ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಧರ್ಮಸ್ಥಳಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ನಿನ್ನೆಯಿಂದ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆಡಳಿತ ಮತ್ತು ವಿಪಕ್ಷ ಎಂಬುದಕ್ಕಿಂತ ನಡೆಯುತ್ತಿರುವ ಘಟನೆಯ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಮಂಜುನಾಥ ಸ್ವಾಮಿಯೇ ಸಿಎಂಗೆ ತನಿಖೆ ಮಾಡುವಂತೆ ಬುದ್ಧಿ ನೀಡಿದ್ದಾನೆ. ಒಬ್ಬ ಅನಾಮಿಕ ನೂರು ಜನರನ್ನು ಕೊಂದು ಮುಚ್ಚಿಹಾಕಿದ್ದೇನೆ ಎಂದರೆ, ಈತನೂ ಭಾಗಿಯಾಗಿದ್ದಾನೆ. ಈವರೆಗೂ ಮುಚ್ಚಿಟ್ಟಿದ್ದಾರೆ ಎಂದಾಗುತ್ತದೆ. ಹೀಗಾಗಿ ಅವನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ನಾನು ಧರ್ಮಸ್ಥಳ ವಿಚಾರಕ್ಕೆ ಮಾತನಾಡಿದ್ದಕ್ಕೆ ಎಸ್‌ಐಟಿಗೆ ದೂರು ನೀಡಿದ್ದಾರೆ. ಸೋಮವಾರ ಅದರ ವಿರುದ್ಧ ಪ್ರಿವಿಲೇಜ್ ಮೂವ್ ಮಾಡುತ್ತೇನೆ. ಸೋಮವಾರ ಸರ್ಕಾರ ಉತ್ತರ ಕೊಡುತ್ತದೆ ಎಂದು ಭಾವಿಸಿದ್ದೇನೆ. ಪ್ರಕರಣವನ್ನು ಇಲ್ಲಿಗೆ ನಿಲ್ಲಿಸುತ್ತೀರಾ ಅಥವಾ ಮುಂದುವರೆಸುತ್ತೀರಾ ಎಂದು ಪ್ರಶ್ನಿಸಲಿದ್ದೇವೆ ಎಂದರು.

Exit mobile version