ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ರಾಜ್ಯ ಸಂಪುಟ ಸಭೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಘರ್ಷಣೆಯ ವಿಷಯವು ಪ್ರಮುಖ ಚರ್ಚೆಯ ವಿಷಯವಾಯಿತು. ನೇತ್ರಾವತಿ ನದಿಯ ದಡದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ಶೋಧ ಕಾರ್ಯದ ಸಂದರ್ಭದಲ್ಲಿ ನಿನ್ನೆ ಗಲಾಟೆ ಸಂಭವಿಸಿತ್ತು. ಈ ವಿಷಯವು ಸಂಪುಟ ಸಭೆಯಲ್ಲಿ ದೊಡ್ಡದಾಗಿ ಚರ್ಚೆಯ ಕೇಂದ್ರಬಿಂದುವಾಯಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು?
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಭೆಯಲ್ಲಿ ಧರ್ಮಸ್ಥಳದ ಘಟನೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. “ನಿನ್ನೆ ಅನಾಮಿಕ ವ್ಯಕ್ತಿಯೊಬ್ಬ ತೋರಿಸಿದ ಸ್ಥಳದಲ್ಲಿ ಎಸ್‌ಐಟಿ ತಂಡವು ಶೋಧ ಕಾರ್ಯ ನಡೆಸಿತ್ತು. ಒಂದು ಸ್ಥಳದಲ್ಲಿ ಅಸ್ಥಿಪಂಜರ ಮತ್ತು ಮೊನ್ನೆ ಬೇರೆ ಕಡೆ ಕೆಲವು ಮೂಳೆ ತುಣುಕುಗಳು ಪತ್ತೆಯಾಗಿವೆ. ಎಸ್‌ಐಟಿ ತನಿಖೆಯನ್ನು ತೀವ್ರಗೊಳಿಸಿದ್ದು, ಪತ್ತೆಯಾದ ಅಸ್ಥಿಪಂಜರಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ,” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಿಳಿಸಿದರು.
ನಿನ್ನೆ ಶೋಧ ಕಾರ್ಯದ ವೇಳೆ ಸ್ಥಳೀಯರಿಂದ ಗಲಾಟೆಯಾಗಿತ್ತು. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇಲ್ಲಸಲ್ಲದ ಮಾಹಿತಿಯನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿನ್ನೆ ಸ್ವಲ್ಪ ಘರ್ಷಣೆ ಆಗಿತ್ತು, ಆದರೆ ಪೊಲೀಸರು ತಕ್ಷಣ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ,” ಎಂದು ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ಭದ್ರತೆ ಹೆಚ್ಚಿಸಲು ಸೂಚನೆ:
ಗೃಹ ಸಚಿವರು ಡಿಜಿಪಿಯಿಂದ ಇತ್ತೀಚಿನ ಮಾಹಿತಿಯನ್ನು ಪಡೆದಿದ್ದು, ಧರ್ಮಸ್ಥಳದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸೂಚಿಸಿದ್ದಾರೆ. “ಈಗಾಗಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನಷ್ಟು ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು. ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಬಹಳ ಎಚ್ಚರಿಕೆಯಿಂದ ಕಣ್ಣಿಡಬೇಕಾಗಿದೆ,” ಎಂದು ಗೃಹಸಚಿವ ಜಿ. ಪರಮೇಶ್ವರ್ ಅವರು ತಿಳಿಸಿದರು. ಸಂಪುಟ ಸಭೆಯಲ್ಲಿ ಈ ವಿಷಯವು ಗಂಭೀರ ಚರ್ಚೆಗೆ ಒಳಗಾಯಿತು, ಆದರೆ ತೀರ್ಮಾನಕ್ಕೆ ಬರಲು ಇನ್ನೂ ಸಮಯ ಬೇಕಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.