ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಶನಿವಾರ ಸಂಜೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ನಡೆಸಿದೆ. ಸೌಜನ್ಯಳ ಮಾವ ವಿಠಲ ಗೌಡನನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡಕ್ಕೆ ಕರೆದೊಯ್ದು, SIT ಅಧಿಕಾರಿಗಳು ಸ್ಥಳ ಮಹಜರು ಪೂರ್ಣಗೊಳಿಸಿದ್ದಾರೆ. ಮಹಜರಿನ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ತನಿಖಾ ತಂಡವು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮರಳಿದೆ.
ವಿಠಲ ಗೌಡ ಮತ್ತು ಜಯಂತ್ ಟಿ. ಈ ಜಾಗದಿಂದ ಬುರುಡೆಯನ್ನು ತೆಗೆದು ಚಿನ್ನಯ್ಯನಿಗೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಸ್ಥಳ ಮಹಜರು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಜಯಂತ್ ಟಿ. ಮತ್ತು ಗಿರೀಶ್ ಮಟ್ಟಣ್ಣವರ್ ಜೊತೆ ವಿಠಲ ಗೌಡನಿಗೆ ನಿಕಟ ಸಂಪರ್ಕವಿತ್ತು ಎಂಬ ಕಾರಣಕ್ಕಾಗಿ SIT ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಗೊಳಿಸಿತ್ತು. ಶುಕ್ರವಾರದಂದು ವಿಠಲ ಗೌಡ SIT ಕಚೇರಿಗೆ ಹಾಜರಾಗಿದ್ದರು.
ತನಿಖೆಯ ಭಾಗವಾಗಿ, SIT ಈ ಪ್ರಕರಣದಲ್ಲಿ ಆರೋಪಿಗಳು ಮತ್ತು ಸಾಕ್ಷಿಗಳಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಬಂಗ್ಲೆಗುಡ್ಡದಲ್ಲಿ ಕಂಡುಬಂದಿರುವ ಅಸ್ಥಿಪಂಜರ ಅವಶೇಷಗಳಿಗೆ ಸಂಬಂಧಿಸಿದಂತೆ ಫಾರೆನ್ಸಿಕ್ ಪರೀಕ್ಷೆಯನ್ನು ಮುಂದುವರಿಸಲಾಗಿದೆ.