ತುಂಗಾಭದ್ರ ನದಿ ಆರ್ಭಟ: ಉಕ್ಕಡಗಾತ್ರಿ ದೇವಸ್ಥಾನದವರೆಗೆ ತಲುಪಿದ ನದಿ ನೀರು

ದಾವಣಗೆರೆ (ಆಗಸ್ಟ್ 03): ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ತುಂಗಾ ನದಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದ್ದು, ಇದರ ಪರಿಣಾಮವಾಗಿ ತುಂಗಾಭದ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರ ಪರಿಣಾಮವಾಗಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನದ ಆವರಣದವರೆಗೆ ನದಿ ನೀರು ತಲುಪಿದ್ದು, ಪ್ರವಾಹದ ಭೀತಿ ಎದುರಾಗಿದೆ.

ತುಂಗಾ ನದಿಯಿಂದ ಸುಮಾರು 92 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿರುವ ಹಿನ್ನೆಲೆಯಲ್ಲಿ ತುಂಗಾಭದ್ರ ನದಿ ಮೈದುಂಬಿ ಹರಿಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗದಿದ್ದರೂ, ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನದಿಯ ಹರಿವು ಏರಿಕೆಯಾಗಿದೆ.

ನೀರಿನ ಮಟ್ಟ ಏರಿಕೆಯಿಂದ ಉಕ್ಕಡಗಾತ್ರಿ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ, ಸ್ನಾನಘಟ್ಟದ ಪಕ್ಕದಲ್ಲಿದ್ದ 20ಕ್ಕೂ ಹೆಚ್ಚು ಅಂಗಡಿಗಳು ನೀರಿನಲ್ಲಿ ಮುಳುಗುವ ಸ್ಥಿತಿ ನಿರ್ಮಾಣವಾಗಿದ್ದು ಅಂಗಡಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ, ಮುನ್ನೆಚ್ಚರಿಕಾ ಕ್ರಮವಾಗಿ ದೇವಸ್ಥಾನ ಆಡಳಿತ ಮಂಡಳಿ ಅಂಗಡಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನದಿಪಾತ್ರದತ್ತ ಯಾರೂ ತೆರಳದಂತೆ ದೇವಸ್ಥಾನ ಆಡಳಿತ ಕಟ್ಟುನಿಟ್ಟಿನ ಸೂಚನೆಯನ್ನು ಕೂಡಾ ನೀಡಿದೆ. ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಸ್ಥಳೀಯ ಆಡಳಿತವೂ ನಿಗಾ ವಹಿಸಿದ್ದು, ಅಪಾಯಕಾರಿ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಮನವಿ ಮಾಡಲಾಗಿದೆ.

ಹವಾಮಾನ ಇಲಾಖೆ ಮಲೆನಾಡು ಭಾಗದಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿರುವುದರಿಂದ ತುಂಗಾಭದ್ರ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

ಪ್ರವಾಹದ ಪರಿಣಾಮ ಪತ್ತೇಪುರ–ಉಕ್ಕಡಗಾತ್ರಿ ಸಂಪರ್ಕ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮವಾಗಿ ಉಕ್ಕಡಗಾತ್ರಿ ಕ್ಷೇತ್ರಕ್ಕೆ ತೆರಳುವ ಭಕ್ತರು ಮತ್ತು ಸಾರ್ವಜನಿಕರು ಸುಮಾರು 20 ಕಿಲೋಮೀಟರ್ ಸುತ್ತುವರಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸ್ಥಳೀಯರು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯಗಳು ಮತ್ತೆ ಕೇಳಿಬಂದಿವೆ.

Exit mobile version