ದಾವಣಗೆರೆ ರೈತರಿಗೆ ಸಿಹಿಸುದ್ದಿ; ಭದ್ರಾ ನೀರು ಬಿಡುಗಡೆ

ಡೈವರ್ಟ್ (5)

ದಾವಣಗೆರೆ ಸೆ.18: ರಾಜ್ಯದಲ್ಲಿ ಮಳೆಯ ಕೊರತೆಯಾಗಿ ಕೆಲ ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದೆ. ಈ ಬರಗಾಲದಿಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ. ತೆಂಗು, ಕಬ್ಬು, ಅಡಿಕೆ ಒಣಗುತ್ತಿವೆ ಎಂದು ರೈತರು ಕೆರಳಿಕೆಂಡವಾಗಿದ್ದಾರೆ. ಭದ್ರಾ ಅಚ್ಚುಕಟ್ಟು ಭಾಗದ ನಾಲೆಗಳಿಗೆ ತಕ್ಷಣ ನೀರು ಬಿಡುವಂತೆ ಆಗ್ರಹಿಸಿ ರೈತರು ಬೀದಿಗಿಳಿದಿದಿದ್ದರು. ಇದೀಗ ಆ ರೈತರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹೋರಾಟಕ್ಕೆ ಸ್ಪಂದನೆ ಸಿಕ್ಕಿದ್ದು, ದಾವಣಗೆರೆ ಭಾಗದ ರೈತರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ವಿತರಣಾ ನಾಲೆಗಳಿಗೆ ಸೆಪ್ಟೆಂಬರ್‌ 17ರ ಮಧ್ಯರಾತ್ರಿ 12 ಗಂಟೆಯಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್‌ 2ರವರೆಗೆ ಒಟ್ಟು 15 ದಿನ ನೀರು ಹರಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಅನೇಕ ಕಡೆಗಳಲ್ಲಿ ನೀರಿನ ಅಭಾವ ತಲೆದೂರಿದೆ.  ನೀರಿಲ್ಲದೆ ರೈತರು ಕಂಗಾಲಗಿದ್ದಾರೆ. ಬೆಳೆಗಳು ಹಾಗೂ ಜನ-ಜಾನುವಾರುಗಳಿಗೆ ನೀರಿನ ಅಗತ್ಯತೆ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸುವಂತೆ ರೈತರು ಹಲವು ದಿನಗಳಿಂದ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. 

 ನಾಲೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ದಾವಣಗೆರೆ ಭಾಗದ ರೈತರು ಟ್ರ್ಯಾಕ್ಟರ್‌ಗಳ ಸಮೇತ ಬೃಹತ್ ಹೋರಾಟ ಕೂಡಾ ನಡೆಸಿದ್ದರು. ರೈತ ಮುಖಂಡ ತೇಜಸ್ವಿ ಪಟೇಲ್ ಸೇರಿದಂತೆ ಹಲವು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್‌ 16ರಂದು ಟ್ರ್ಯಾಕ್ಟರ್‌ಗಳೊಂದಿಗೆ ದಾವಣಗೆರೆಯತ್ತ ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದು, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರೈತರ ಅಹವಾಲು ಆಲಿಸಿದ್ದರು.

ಇದಕ್ಕೂ ಮುನ್ನ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನೀರು ಬಿಡುಗಡೆಗೆ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆ ನಡೆಸಿದ್ದರು. ಒಣಗುತ್ತಿರುವ ಬೆಳೆಗಳನ್ನು ಉಳಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತಕ್ಷಣ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು.

ರೈತರ ಒತ್ತಾಯ ಹಾಗೂ ಜಿಲ್ಲಾಡಳಿತದ ವರದಿಗಳ ಆಧಾರದ ಮೇಲೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸೆ.17ರ ಮಧ್ಯರಾತ್ರಿ 12ರಿಂದ ಅ.2ರವರೆಗೆ 15 ದಿನಗಳ ಕಾಲ ನೀರು ಹರಿಸಲು ಆದೇಶಿಸಲಾಗಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಇದೀಗ ಸಂತಸ ಮೂಡಿದೆ.

Exit mobile version