ಎರಡು ಗುಂಪುಗಳ ಮಾರಾಮಾರಿ: ಗಂಭೀರ ಗಾಯಗೊಂಡಿದ್ದ ಯುವಕ ಸಾ*ವು

Untitled design (96)

ದಾವಣಗೆರೆ ಸೆ.13: ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ಮೊಹಮ್ಮದ್ ಹುಸೇನ್ ಅಲಿಯಾಸ್ ಜಿಷನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ದಾವಣಗೆರೆಯ ಬೀಡಿ ಲೇಔಟ್‌ನಲ್ಲಿ ಒಂದು ವಾರದ ಹಿಂದೆ ನಡೆದಿದ್ದ ಗಲಾಟೆಯಲ್ಲಿ ಜಿಷನ್ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದರು. ಜಿಷನ್ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.

ಈ ಕುರಿತು ದಾವಣಗೆರೆ ಎಸ್ಪಿ ಹೆಚ್.ಟಿ. ಶೇಖರ್ ಮಾಹಿತಿ ನೀಡಿದ್ದು, ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು ಎಂದು ತಿಳಿಸಿದ್ದಾರೆ. ಗಲಾಟೆ ವೇಳೆ ಎರಡೂ ಗುಂಪಿನವರು ಮಾರಕಾಸ್ತ್ರಗಳನ್ನು ಬಳಸಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು.

ಸೆಪ್ಟೆಂಬರ್ 7ರಂದು ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲ ಗಾಯಾಳುಗಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ಮೊಹಮ್ಮದ್ ಹುಸೇನ್ ಅಲಿಯಾಸ್ ಜಿಷನ್‌ಗೆ ತೀವ್ರ ಗಾಯಗಳಾಗಿದ್ದರಿಂದ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಇದೀಗ ಆತ ಮೃತಪಟ್ಟಿರುವುದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದ್ದು, ಘಟನೆಯ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ. ಜಿಷನ್ ಸಾವಿನ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಆರೋಪಿಗಳ ವಿಚಾರಣೆ ವೇಳೆ ಗಲಾಟೆಗೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ. 2025ರಲ್ಲಿ ಎರಡು ಕುಟುಂಬಗಳ ನಡುವೆ ದೂರು ಮತ್ತು ಪ್ರತಿದೂರು ದಾಖಲಾಗಿದ್ದವು. ಈ ಪ್ರಕರಣಗಳು ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದ್ದಾಗಿದ್ದವು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಎರಡೂ ಕುಟುಂಬಗಳ ನಡುವೆ ವೈಮನಸ್ಸು ಮುಂದುವರಿದಿತ್ತು ಎನ್ನಲಾಗಿದೆ.

ಇದೇ ವಿಚಾರವಾಗಿ ಕಳೆದ ವಾರ ಮತ್ತೆ ಎರಡೂ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಾಟೆಗೆ ಗಾಂಜಾ ಅಥವಾ ಹಫ್ತಾ ವಸೂಲಿ ಕಾರಣ ಎಂಬ ಆರೋಪಗಳನ್ನು ಎಸ್ಪಿ ಹೆಚ್.ಟಿ. ಶೇಖರ್ ತಳ್ಳಿಹಾಕಿದ್ದಾರೆ.

ಜಿಷನ್ ಸಾವಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಪೊಲೀಸರು ಮತ್ತಷ್ಟು ಆಳವಾಗಿ ತನಿಖೆ ನಡೆಸುತ್ತಿದ್ದು, ಬಂಧಿತರ ವಿಚಾರಣೆ ಸೇರಿದಂತೆ ಘಟನೆಗೆ ಸಂಬಂಧಿಸಿದ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ.

Exit mobile version