ದಾವಣಗೆರೆ: ಪ್ರಕೃತಿಯ ವಿಚಿತ್ರ ಘಟನೆಗಳು ಕೆಲವೊಮ್ಮೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತವೆ. ಇಂತಹದ್ದೇ ಒಂದು ಅಚ್ಚರಿಯ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸೈಯದ್ ನೂರ್ ಎಂಬವರ ಮನೆಯಲ್ಲಿ ಸಾಕಿದ್ದ ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆ ಇಟ್ಟು ಗ್ರಾಮಸ್ಥರನ್ನು ಬೆರಗಾಗಿಸಿದೆ.
ಹೌದು, ಸೈಯದ್ ನೂರ್ ಸುಮಾರು 10 ನಾಟಿ ಕೋಳಿಗಳನ್ನು ಸಾಕಿದ್ದು, ಇವುಗಳ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಸಾಮಾನ್ಯವಾಗಿ ಬಿಳಿ ಮೊಟ್ಟೆಗಳನ್ನು ಇಡುತ್ತಿದ್ದ ಈ ಕೋಳಿಗಳ ಪೈಕಿ ಒಂದು ಕೋಳಿ ಈ ಬಾರಿ ನೀಲಿ ಮೊಟ್ಟೆ ಇಟ್ಟಿದೆ. ಬೆಳಿಗ್ಗೆ ಕೋಳಿಗೂಡಿಗೆ ಹೋದ ಸೈಯದ್ ನೂರ್, ಈ ಅಸಾಮಾನ್ಯ ಮೊಟ್ಟೆಯನ್ನು ಕಂಡು ಗಾಬರಿಯಾಗಿ, ತಕ್ಷಣವೇ ಚನ್ನಗಿರಿ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ನೀಲಿ ಮೊಟ್ಟೆಯನ್ನು ಪರಿಶೀಲಿಸಿ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮೊಟ್ಟೆಯ ಮೇಲ್ಭಾಗದಲ್ಲಿ ನೀಲಿ ಬಣ್ಣ ಕಾಣಿಸಿಕೊಂಡಿದ್ದು, ಒಳಗಿನ ಭಾಗ ಮಾಮೂಲಿಯಾಗಿದೆ. ಈ ನೀಲಿ ಬಣ್ಣಕ್ಕೆ ಕಾರಣವಾಗಿರಬಹುದಾದ ಬಿಲಿವರ್ಡಿನ್ ಎಂಬ ವರ್ಣದ್ರವ್ಯವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಚನ್ನಗಿರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಶೋಕ್, “ಈ ಘಟನೆ ಅನಿರೀಕ್ಷಿತವಾದದ್ದು. ಕೋಳಿಯು ಮುಂದಿನ ದಿನಗಳಲ್ಲಿ ನಿರಂತರವಾಗಿ ನೀಲಿ ಮೊಟ್ಟೆಗಳನ್ನು ಇಡುವುದಾದರೆ, ಆ ಕೋಳಿಯನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು,” ಎಂದು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರಲ್ಲಿ ಭಾರೀ ಕುತೂಹಲ ಮೂಡಿಸಿದೆ.