ಬೇಸಿಗೆಯ ತೀವ್ರ ಬಿಸಿಲು ಮತ್ತು ಝಳಕ್ಕೆ ಹೈರಾಣಾಗಿದ್ದ ದಾವಣಗೆರೆ ಜಿಲ್ಲೆಯ ಜನರಿಗೆ ಇಂದು ಆಕಸ್ಮಿಕವಾಗಿ ಸುರಿದ ಮಳೆ ತಂಪು ನೀಡಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ, ರಾಜಗೊಂಡನಹಳ್ಳಿ, ದಂಡಿಗೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಜನಜೀವನಕ್ಕೆ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿ ಬಿಸಿಲಿನ ಬೇಗೆಯಿಂದ ಜನರು ತತ್ತರಿಸಿ ಹೋಗಿದ್ದರು. ಇಂತಹ ಸಮಯದಲ್ಲಿ ಬೇಸಿಗೆಯಲ್ಲಿ ಅಕಾಲಿಕವಾಗಿ ಸುರಿದ ಈ ಮಳೆಯು ರೈತರು ಮತ್ತು ಸಾರ್ವಜನಿಕರಿಗೆ ದೊಡ್ಡ ರಿಲೀಫ್ ನೀಡಿದೆ. ಮಳೆಯಿಂದಾಗಿ ವಾತಾವರಣ ತಂಪಾಗಿ, ಜನರು ನಿರಾಳರಾಗಿ ಉಸಿರು ಬಿಡುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು, ರೈತರು ತಮ್ಮ ಹೊಲ-ಗದ್ದೆಗಳಲ್ಲಿ ನೀರು ನಿಂತುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮಳೆಯು ಬೆಳೆಗಳಿಗೆ ಸಹಾಯಕವಾಗುವುದು ಎಂದು ಅವರು ಹೇಳುತ್ತಿದ್ದಾರೆ. ಜಿಲ್ಲೆಯ ಇತರ ಭಾಗಗಳಲ್ಲೂ ಹಗುರ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
