ಮದುವೆಯ ಭರವಸೆ ನೀಡಿ ದಲಿತ ಮಹಿಳೆಗೆ ಮೋಸ: ತಿಮ್ಮೇಗೌಡ ಬಂಧನ

Film 2025 04 08t090414.181

ವರದಿ: ಮೂರ್ತಿ.ಬಿ, ನೆಲಮಂಗಲ

ಮದುವೆಯಾಗುವ ಭರವಸೆ ನೀಡಿದ ಮೇಲೆ ಪತಿಯಿಂದ ವಿವಾಹ ವಿಚ್ಛೇದನ ಪಡೆದಿದ್ದ ದಲಿತ ಮಹಿಳೆಗೆ ಮೋಸ ಮಾಡಿದ್ದು, ಅತ್ಯಾಚಾರ, ಬೆದರಿಕೆ ಹಾಗೂ ಹಣ-ಆಭರಣ ದೋಚಿದ ಆರೋಪದಲ್ಲಿ ತಿಮ್ಮೇಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ನಡೆದಿದೆ.

ಪತಿಯೊಂದಿಗೆ ವಿಚ್ಛೇದನ ಪಡೆದಿದ್ದ ಬೆಂಗಳೂರಿನ ದಾಸರಹಳ್ಳಿಯ ಅನುರಾಧಾ ಎಂಬ ಮಹಿಳೆಗೆ ಬಾಳ ಸಂಗಾತಿ ಆಗುವುದಾಗಿ ಭರವಸೆ ನೀಡಿದ ಆರೋಪಿ, ಅವಳ ವಿಶ್ವಾಸಗಳಿಸಿ ರಾಜ್ಯ ಮತ್ತು ಹೊರರಾಜ್ಯ ಪ್ರವಾಸಗಳಿಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಅನುರಾಧಾ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗರ್ಭವತಿಯಾದ ಅನುರಾಧಾಗೆ ಬಲವಂತವಾಗಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಬಳಿಕ ಅವಳು ದಲಿತ ಜಾತಿಗೆ ಸೇರಿದವಳಾಗಿದ್ದು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ಸಂಬಂಧವನ್ನು ತಿರಸ್ಕರಿಸಿದ್ದಾನೆ. ಅಲ್ಲದೆ, 10 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ವಂಚಿಸಿ ಮರೆಮಾಚಿದ್ದಾನೆ ಎಂಬ ಆರೋಪವಿದೆ.

ನೊಂದ ಅನುರಾಧಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ತಿಮ್ಮೇಗೌಡನನ್ನು ಬಂಧಿಸಿದ್ದಾರೆ. ಮುಂದಿನ ತನಿಖೆ ಮುಂದುವರಿಯುತ್ತಿದೆ.

| Reported by: ಮೂರ್ತಿ.ಬಿ ನೆಲಮಂಗಲ
Exit mobile version