ಬೆಂಗಳೂರು: ನಾಳೆ(ಸ.10) ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಭಾರತ ವಲಯದ 11ನೇ ಸಮ್ಮೇಳನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉದ್ಘಾಟಿಸಲಿದ್ದಾರೆ.
“ಶಾಸಕಾಂಗದ ಸದನಗಳಲ್ಲಿ ಚರ್ಚೆಗಳು ಮತ್ತು ಮಾತುಕತೆಗಳು: ಜನರ ನಂಬಿಕೆಯನ್ನು ನಿರ್ಮಿಸುವುದು, ಜನರ ಆಕಾಂಕ್ಷೆಗಳನ್ನು ಪೂರೈಸುವುದು” ವಿಷಯದ ಕುರಿತು ಚರ್ಚೆ ನಡೆಯಲಿದೆ.
ಗುರುವಾರ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್ ಸ್ವಾಗತ ಭಾಷಣ ಮಾಡಲಿದ್ದು, ಸಿಪಿಎ ಕರ್ನಾಟಕ ಶಾಖೆಯ ಕಾರ್ಯದರ್ಶಿ ವಂದನಾರ್ಪಣೆ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗದ ಸ್ಪೀಕರ್‌ಗಳು, ಉಪ ಸಭಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಇತರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಿಪಿಎ ಪ್ರಧಾನ ಕಾರ್ಯದರ್ಶಿ ಮತ್ತು ವಿದೇಶಿ ಸಂಸತ್ತುಗಳ ಸಭಾಧ್ಯಕ್ಷರಿಗೂ ಆಹ್ವಾನ ನೀಡಲಾಗಿದೆ. ಸಂಸದೀಯ ಮಹತ್ವದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿದ್ದು, ಅಭಿಪ್ರಾಯ ವಿನಿಮಯ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಭಾರತ ವಲಯದ ಸಂಸದೀಯ ಸಂಸ್ಥೆಗಳ ಬಲವರ್ಧನೆಗೆ ಈ ಸಮ್ಮೇಳನ ವೇದಿಕೆಯಾಗಲಿದೆ.
“ಶಾಸಕಾಂಗದ ಚರ್ಚೆಗಳು ಮತ್ತು ಮಾತುಕತೆಗಳ ಮೂಲಕ ಜನರ ನಂಬಿಕೆಯನ್ನು ಗಳಿಸುವುದು ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ಎಂಬ ಕಾರ್ಯಸೂಚಿಯಡಿ ನಡೆಯುವ ಈ ಸಮ್ಮೇಳನವು, ಶಾಸಕಾಂಗದ ಕಾರ್ಯವೈಖರಿಯನ್ನು ಸುಧಾರಿಸಲು ಮತ್ತು ಜನರಿಗೆ ಹೆಚ್ಚು ಪಾರದರ್ಶಕ ಆಡಳಿತವನ್ನು ಒದಗಿಸಲು ಗಮನ ಕೇಂದ್ರೀಕರಿಸಲಿದೆ.
