ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದ ಜಿಲ್ಲಾಡಳಿತದ ಅತ್ಯುನ್ನತ ಅಧಿಕಾರಿಗಳ ಡಿಜಿಟಲ್ ಸಹಿಯನ್ನೇ ದುರುಪಯೋಗಪಡಿಸಿಕೊಂಡು ಸರ್ಕಾರದ ಹಣಕ್ಕೆ ಕನ್ನ ಹಾಕಲು ಯತ್ನಿಸಿದ ಐವರು ಹೊರಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾಧಿಕಾರಿ (DC) ಹಾಗೂ ಅಪರ ಜಿಲ್ಲಾಧಿಕಾರಿಗಳ (ADC) ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಖಜಾನೆಗೆ ವಂಚಿಸಲು ಯತ್ನಿಸಿದ ಕೃತ್ಯ ಈಗ ಬಯಲಾಗಿದೆ.
ನಗರಾಭಿವೃದ್ಧಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳೇ ಈ ವಂಚನೆಯ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ್, ಮೆಹಬೂಬ್ ಬಾಷಾ ಹಾಗೂ ವೆಂಕಟೇಶ್ ಎಂಬ ಐವರನ್ನು ಚಿತ್ರದುರ್ಗ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಪ್ರಮುಖ ಆರೋಪಿ ಸೈಯದ್ ಸಾದಿಕ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಬಂಧಿತ ನೌಕರರು ಯೋಜಿತ ರೀತಿಯಲ್ಲಿ ಸರ್ಕಾರಿ ಹಣವನ್ನು ಲಪಟಾಯಿಸಲು ಸಂಚು ರೂಪಿಸಿದ್ದರು. ನಗರಾಭಿವೃದ್ಧಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್‌ಗಳನ್ನು ಸಿದ್ಧಪಡಿಸಿದ್ದರು. ಈ ಬಿಲ್‌ಗಳು ಅಧಿಕೃತವಾಗಿ ಕಾಣುವಂತೆ ಮಾಡಲು ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರ ಡಿಜಿಟಲ್ ಸಹಿಯನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿದ್ದರು. ಈ ನಕಲಿ ದಾಖಲೆಗಳನ್ನು ಹಣ ಬಿಡುಗಡೆಗಾಗಿ ಜಿಲ್ಲಾ ಖಜಾನೆಗೆ (Treasury) ಕಳುಹಿಸಿಕೊಟ್ಟಿದ್ದರು.
ಜಿಲ್ಲಾ ಖಜಾನೆಯ ಅಧಿಕಾರಿಗಳು ಈ ಬಿಲ್‌ಗಳನ್ನು ಪರಿಶೀಲಿಸುವಾಗ ಅಧಿಕಾರಿಗಳ ಡಿಜಿಟಲ್ ಸಹಿಯ ಬಗ್ಗೆ ಅನುಮಾನ ವ್ಯಕ್ತವಾಯಿತು. ತಾಂತ್ರಿಕವಾಗಿ ಮತ್ತು ದಾಖಲೆಗಳ ಆಧಾರದ ಮೇಲೆ ಆಕ್ಷೇಪಣೆ ಎತ್ತಿದ ಖಜಾನೆ ಇಲಾಖೆಯು ಈ ಕುರಿತು ನಗರಾಭಿವೃದ್ಧಿ ಕೋಶಕ್ಕೆ ಮಾಹಿತಿ ನೀಡಿತು. ಕೂಡಲೇ ಎಚ್ಚೆತ್ತ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ಅವರು ಆಂತರಿಕ ಪರಿಶೀಲನೆ ನಡೆಸಿದಾಗ, ಅಧಿಕಾರಿಗಳ ಗಮನಕ್ಕೆ ಬಾರದೆಯೇ ಈ ಬಿಲ್‌ಗಳನ್ನು ಸೃಷ್ಟಿಸಿರುವುದು ದೃಢಪಟ್ಟಿತು.
ತಮ್ಮ ಇಲಾಖೆಯಲ್ಲೇ ನಡೆದ ಈ ಬೃಹತ್ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿದ ನಿರ್ದೇಶಕಿ ರೇಷ್ಮಾ ಹಾನಗಲ್ ಅವರು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಇವರು ಈ ಹಿಂದೆ ಇಂತಹ ಇನ್ನೆಷ್ಟು ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಡಿಜಿಟಲ್ ಭದ್ರತೆಯ ಬಗ್ಗೆ ಈ ಘಟನೆ ಈಗ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
