ಚಿತ್ರದುರ್ಗದಲ್ಲಿ ಕ್ಯಾನ್ಸರ್ 3ನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊ*ಲೆ: ಆರೋಪಿ ಅರೆಸ್ಟ್!

1 2025 08 20t141503.710

ಚಿತ್ರದುರ್ಗ: ಚಿತ್ರದುರ್ಗದ ವಿದ್ಯಾರ್ಥಿನಿ ವರ್ಷಿತಾ (19) ಕೊಲೆ ಪ್ರಕರಣ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಮೃತಳ ಸಂಬಂಧಿಕರು ಮತ್ತು ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕ ಚೇತನ್ ಈ ಕೊಲೆಯನ್ನು ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರ ಬಳಿ ಅಪ್ರಾಪ್ತ ಯುವತಿಯ ಶವ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ವರ್ಷಿತಾ (19) ಬರ್ಬರವಾಗಿ ಹತ್ಯೆಗೊಳಗಾಗಿದ್ದಾಳೆ. ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಆರೋಪಿ ಚೇತನ್ ಈ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆಗೆ ಕಾರಣವೇಣು?

ಚೇತನ್ ಮತ್ತು ವರ್ಷಿತಾ ಸಂಪರ್ಕದಲ್ಲಿದ್ದರು. ಆದರೆ, ವರ್ಷಿತಾ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದಳು ಎಂಬ ಶಂಕೆಯಿಂದ ಚೇತನ್ ಕೊಲೆ ಮಾಡಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆತ ಗೋನೂರು ಬಳಿಗೆ ವರ್ಷಿತಾಳನ್ನು ಕರೆದೊಯ್ದು, ಆಕೆಯ ಮೇಲೆ ಹಲ್ಲೆ ಮಾಡಿದಾಗ ಆಕೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಬಳಿಕ, ಆರೋಪಿ ಶವಕ್ಕೆ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವರ್ಷಿತಾ ಎಸ್‌ಸಿ, ಎಸ್‌ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದಳು. ಆಗಸ್ಟ್ 14ರಂದು ಊರಿಗೆ ಹೋಗಲು ರಜೆ ಕೋರಿ ಹಾಸ್ಟೆಲ್ ವಾರ್ಡನ್‌ಗೆ ಪತ್ರ ನೀಡಿದ್ದಳು. ಅದೇ ದಿನ ಆಕೆ ಕಾಲೇಜು ಯೂನಿಫಾರ್ಮ್‌ನಲ್ಲಿ, ಫೋನ್‌ನಲ್ಲಿ ಮಾತನಾಡುತ್ತಾ ಸಹಪಾಠಿಯೊಂದಿಗೆ ಹಾಸ್ಟೆಲ್‌ನಿಂದ ಹೊರಟಿದ್ದಳು. ಆದರೆ, ಆಕೆ ಮರಳಿ ಬಾರದಿರುವುದರಿಂದ ಪೋಷಕರು ಆತಂಕಗೊಂಡಿದ್ದರು.

ವರ್ಷಿತಾ ತಾಯಿ ಜ್ಯೋತಿ ತಿಪ್ಪೇಸ್ವಾಮಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. “ಮೊನ್ನೆ ರಾತ್ರಿ ಕರೆ ಮಾಡಿದಾಗ ಮಗಳು ‘ಅಮ್ಮ’ ಎಂದು ಕರೆದಳು, ಆದರೆ ಬಳಿಕ ಫೋನ್ ಸ್ವಿಚ್ ಆಫ್ ಆಯಿತು. ನಿನ್ನೆ ಬೆಳಗ್ಗೆ ಹಾಸ್ಟೆಲ್‌ಗೆ ಭೇಟಿ ನೀಡಿದರೂ ಆಕೆ ಸಿಗಲಿಲ್ಲ. ಐಮಂಗಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದೆವು. ಸಂಜೆ ವೇಳೆಗೆ ವರ್ಷಿತಾ ಕೊಲೆಯಾಗಿರುವ ವಿಷಯ ತಿಳಿಯಿತು. ಚೇತನ್ ಆಕೆಯನ್ನು ಕರೆದೊಯ್ದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ. ಆರೋಪಿಗೆ ಗಲ್ಲಿಗೇರಿಸಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷಿತಾಳ ತಂದೆ ತಿಪ್ಪೇಸ್ವಾಮಿ, “ಹಾಸ್ಟೆಲ್ ಸಿಬ್ಬಂದಿ ಸರಿಯಾದ ಕಾಳಜಿಯನ್ನು ವಹಿಸಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಚೇತನ್ ವರ್ಷಿತಾಳೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದ. ನಮಗೆ ನ್ಯಾಯ ಸಿಗುವವರೆಗೆ ಮೃತದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ,” ಎಂದು ಆಗ್ರಹಿಸಿದ್ದಾರೆ.

Exit mobile version