ಚಿತ್ರದುರ್ಗದಲ್ಲಿ ಆಟೋ-ಖಾಸಗಿ ಬಸ್ ನಡುವೆ ಭೀಕರ ಡಿಕ್ಕಿ: ನಾಲ್ವರ ಸ್ಥಿತಿ ಗಂಭೀರ!

0 (25)

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭಯಾನಕ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಎರಡು ಬಸ್‌ಗಳ ನಡುವೆ ಆಟೋ ಸಿಲುಕಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖಾಸಗಿ ಬಸ್‌ವೊಂದು ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ನಂತರ ಮುಂದೆ ತೆರಳುತ್ತಿದ್ದ ಸರಕಾರಿ ಸಾರಿಗೆ ಬಸ್‌ಗೆ ಅಪ್ಪಳಿಸಿದೆ. ಈ ಡಿಕ್ಕಿಯಿಂದ ಆಟೋ ಸಂಪೂರ್ಣವಾಗಿ ಮುದುಡಿಕೊಂಡಿದ್ದು, ಚಾಲಕ ಸೇರಿದಂತೆ ಐವರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಬಸ್‌ಗಳ ಚಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗಾಯಾಳುಗಳ ಕುಟುಂಬಸ್ಥರು ದುಃಖದಿಂದ ಕಂಗೆಟ್ಟಿದ್ದು, ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ಯಾಂಟರ್ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಶಿವಪುರ ಗೇಟ್ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ವೊಂದು ಕ್ಯಾಂಟರ್ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್ ವಾಹನವು ಹುಬ್ಬಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದರೆ, ಕೆಎಸ್‌ಆರ್‌ಟಿಸಿ ಬಸ್ ಕಡೂರಿನಿಂದ ಹೂವಿನಹಡಗಲಿಗೆ ಸಂಚರಿಸುತ್ತಿತ್ತು.

ನಿದ್ದೆಯ ಮಂಪರಿನಿಂದ ಕ್ಯಾಂಟರ್ ಚಾಲಕ ಬಸ್‌ಗೆ ಡಿಕ್ಕಿ ಹೊಡೆದಿರುವುದು ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತಪಟ್ಟ ಇಬ್ಬರು ಹುಬ್ಬಳ್ಳಿ ಮೂಲದವರೆಂದು ಗುರುತಿಸಲಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version