ಮಲೆ ಮಹದೇಶ್ವರ ಬೆಟ್ಟದ ಬಳಿ ಬಸ್ ಪಲ್ಟಿ: ಇಬ್ಬರು ದುರ್ಮರಣ

Untitled design 2026 06 29T232555.797

ಚಾಮರಾಜನಗರ (ಜೂನ್ 29): ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಮುಗಿಸಿ ಮೈಸೂರಿನತ್ತ ಹಿಂದಿರುಗುತ್ತಿದ್ದ ಭಕ್ತರಿದ್ದ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದು, 42 ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಧುವನಹಳ್ಳಿ ಸಮೀಪ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕ ಚಾಲನೆಯೇ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಮಧುವನಹಳ್ಳಿ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೊದಲು ರಸ್ತೆ ಬದಿಯಲ್ಲಿದ್ದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ಬಸ್ ರಸ್ತೆ ಬದಿಗೆ ಪಲ್ಟಿಯಾಗಿದೆ.

ಅದೃಷ್ಟವಶಾತ್ ಬಸ್ ಸಮೀಪದಲ್ಲಿದ್ದ ಮರಕ್ಕೆ ತಗುಲಿ ನಿಂತ ಕಾರಣ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಮರಕ್ಕೆ ತಾಗದೆ ಕಂದಕಕ್ಕೆ ಉರುಳಿದ್ದರೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಕೊಳ್ಳೇಗಾಲ ಪಟ್ಟಣದ ಪುಟ್ಟನಂಜಮ್ಮ ಹಾಗೂ ಕುದೇರು ಗ್ರಾಮದ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 42 ಪ್ರಯಾಣಿಕರಲ್ಲಿ 21 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಬಳಿಕ ಕೆಲಕಾಲ ಅಂಬ್ಯುಲೆನ್ಸ್‌ಗಳ ಕೊರತೆ ಎದುರಾದ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಖಾಸಗಿ ವಾಹನ ಚಾಲಕರು ತಮ್ಮ ಕಾರುಗಳಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮುತ್ತು ರಾಜ್ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಮಾತನಾಡಿ “ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನುವುದು ಗೋಚರಿಸಿದೆ. ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಬಳಿಕ ಟೈರ್ ಸ್ಫೋಟಗೊಂಡು ಬಸ್ ಪಲ್ಟಿಯಾಗಿದೆ. ಜಿಲ್ಲೆಯ ಅಪಘಾತ ಹೆಚ್ಚಾಗಿ ಸಂಭವಿಸುವ ‘ಬ್ಲಾಕ್ ಸ್ಪಾಟ್’ ಪ್ರದೇಶಗಳಲ್ಲಿ ಈಗಾಗಲೇ ಪರಿಶೀಲನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.

ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು, “ಬೆಟ್ಟದಿಂದ ಇಳಿಯುವಾಗಲೇ ಚಾಲಕ ಅತ್ಯಂತ ವೇಗದಲ್ಲಿ ಬಸ್ ಚಲಾಯಿಸುತ್ತಿದ್ದರು. ಆಗಲೇ ಒಮ್ಮೆ ಅಪಘಾತದಿಂದ ಪಾರಾಗಿದ್ದೆವು. ಆದರೂ ವೇಗ ಕಡಿಮೆ ಮಾಡದೆ ಮುಂದುವರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ” ಎಂದು ಆರೋಪಿಸಿದ್ದಾರೆ.

Exit mobile version