ಬಿಕ್ಲು ಶಿವನ ಕೊಲೆ ಮಾಡಿದ ದಿನವೇ ನಾಪತ್ತೆಯಾಗಿದ್ದ A1 ಆರೋಪಿ ಜಗ್ಗ ಯಾವ್ಯಾವ ದೇಶ ಸುತ್ತಾಡಿದ್ದ ಗೊತ್ತಾ?

1 2025 08 26t151412.265

ಬೆಂಗಳೂರು: ಜುಲೈ 15ರಂದು ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಎ1 ಆರೋಪಿ ಜಗದೀಶ್ (ಜಗ್ಗ)ನನ್ನು ಬಂಧಿಸಿದ್ದಾರೆ. ಈ ಘಟನೆಯ ಬಳಿಕ ಜಗ್ಗನ ಚಲನವಲನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಐಡಿಯ ಗಮನ ಸೆಳೆದಿವೆ.

ಬಿಕ್ಲು ಶಿವನ ಕೊಲೆಯಾದ ದಿನವೇ (ಜುಲೈ 15), ಜಗ್ಗ ಬೆಂಗಳೂರಿನಿಂದ ಪರಾರಿಯಾಗಿದ್ದ. ಮೊದಲಿಗೆ ಚೆನ್ನೈಗೆ ತೆರಳಿ, ಅಲ್ಲಿಂದ ದುಬೈಗೆ ವಿಮಾನದಲ್ಲಿ ಪ್ರಯಾಣಿಸಿದ. ದುಬೈನಲ್ಲಿ ಕೆಲವೇ ದಿನಗಳ ಕಾಲ ಇದ್ದ ಅವನು, ಬಳಿಕ ಥೈಲ್ಯಾಂಡ್‌ಗೆ ತೆರಳಿದ್ದಾನೆ. ಥೈಲ್ಯಾಂಡ್‌ನಲ್ಲಿದ್ದಾಗ ಸಿಐಡಿಯಿಂದ ಬ್ಲೂ ಕಾರ್ನರ್ ನೋಟಿಸ್ ಜಾರಿಯಾದ ಮಾಹಿತಿ ಜಗ್ಗನಿಗೆ ತಿಳಿಯಿತು. ಈ ನೋಟಿಸ್‌ನಿಂದ ಭಯಗೊಂಡ ಅವನು ಥೈಲ್ಯಾಂಡ್ ಬಿಟ್ಟು ಇಂಡೋನೇಷ್ಯಾಕ್ಕೆ ಪ್ರಯಾಣ ಬೆಳೆಸಿದ್ದಾನೆ.

ಸಿಐಡಿ ತಂಡವು ಜಗ್ಗನ ಚಲನವಲನಗಳನ್ನು ಇಂಟರ್‌ಪೋಲ್ ಮೂಲಕ ಸತತವಾಗಿ ಮೇಲ್ವಿಚಾರಣೆ ಮಾಡಿತ್ತು. ಥೈಲ್ಯಾಂಡ್‌ನಿಂದ ಇಂಡೋನೇಷ್ಯಾಕ್ಕೆ ತೆರಳಿದಾಗಲೂ ಅವನ ಚಟುವಟಿಕೆಗಳನ್ನು ಗಮನಿಸಲಾಗಿತ್ತು. ಜಗ್ಗನಿಗೆ ಇಂಟರ್‌ಪೋಲ್ ನೋಟಿಸ್ ತಲುಪಿದಾಗ, ಅವನು ತಕ್ಷಣ ಭಾರತಕ್ಕೆ ವಾಪಸಾಗಲು ನಿರ್ಧರಿಸಿದ. ಸಿಐಡಿ ಅಧಿಕಾರಿಗಳು ಈ ಮಾಹಿತಿಯನ್ನು ಪಡೆದು ದೆಹಲಿ ಏರ್ಪೋರ್ಟ್‌ನಲ್ಲಿ ಬಂಧಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಗ್ಗನನ್ನು ಸಿಐಡಿ ತಂಡವು ಕೂಡಲೇ ಬಂಧಿಸಿತು. ಎಸ್‌ಪಿ ವೆಂಕಟೇಶ್, ಡಿವೈಎಸ್‌ಪಿ ನಂದಕುಮಾರ್, ಗೋಪಾಲ್ ನಾಯಕ್, ಹೇಮಂತ್, ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಮತ್ತು ಪ್ರಶಾಂತ್‌ರ ತಂಡವು ಟ್ರಾನ್ಸಿಟ್ ವಾರೆಂಟ್ ಪಡೆದು ಜಗ್ಗನನ್ನು ಬೆಂಗಳೂರಿಗೆ ಕರೆತಂದಿತು. ಸದ್ಯ ಅವನನ್ನು ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

Exit mobile version