ಬಿಕ್ಲು ಶಿವ ಕೊ*ಲೆ ಪ್ರಕರಣ: ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಬಲಗೈ ಬಂಟ ನಾಪತ್ತೆ!

ಬಂಟ ಅಜಿತ್‌ಗೆ ಬಂಧನ ಭೀತಿ, ಸಿಐಡಿ ತನಿಖೆ ಚುರುಕು

111 (41)

ಬೆಂಗಳೂರು: ರೌಡಿ ಶೀಟರ್ ಶಿವಕುಮಾರ್ ಉರ್ಫ್ ಬಿಕ್ಲು ಶಿವನ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್‌ರವರ ಆಪ್ತ ಸಹಾಯಕ ಬಂಟ ಅಜಿತ್‌ಗೆ ಭಾರತಿನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ನೋಟಿಸ್ ಸ್ವೀಕರಿಸಿದ ಬಳಿಕ ಬಂಧನ ಭೀತಿಯಿಂದ ಅಜಿತ್ ನಾಪತ್ತೆಯಾಗಿದ್ದಾನೆ.

ಪೊಲೀಸರು ಆರೋಪಿ ಕಿರಣ್‌ನ ಮನೆಯ ಮೇಲೆ ದಾಳಿ ನಡೆಸಿದಾಗ, ಬಂಟ ಅಜಿತ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳು ದೊರೆತಿವೆ. ಈ ದಾಖಲೆಗಳ ಕುರಿತು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅಜಿತ್‌ಗೆ ಸೂಚನೆ ನೀಡಿದ್ದರು. ಆದರೆ, ಅಜಿತ್ ವಿಳಾಸವಿಲ್ಲದ ಲೆಟರ್‌ಹೆಡ್‌ನಲ್ಲಿ ಉತ್ತರಿಸಿ, “ನಾನು ಹೈಕೋರ್ಟ್ ವಕೀಲ. ನನಗೂ ಕೊಲೆ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದರೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿದ್ದ. ಈ ಉತ್ತರಕ್ಕೆ ಸಂಬಂಧಿಸಿ ಪೊಲೀಸರು ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಇದೀಗ ಟಿ.ಸಿ. ಪಾಳ್ಯದಲ್ಲಿರುವ ಸಿನಿಮಾಸ್ ವಿ ಗ್ರೂಪ್ ಕಚೇರಿಯನ್ನು ಖಾಲಿ ಮಾಡಿಕೊಂಡು ಅಜಿತ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದು, ಈಗಾಗಲೇ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಕೊಲೆಯ ಹಿಂದಿನ ಕಾರಣವಾಗಿ ಆಸ್ತಿ ವಿವಾದವನ್ನು ಗುರುತಿಸಲಾಗಿದೆ. ಒಟ್ಟು 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಪ್ರಮುಖ ಆರೋಪಿ ಜಗದೀಶ್ ಉರ್ಫ್ ಜಗ್ಗ ಇನ್ನೂ ತಲೆಮರೆಸಿಕೊಂಡಿದ್ದಾನೆ.

Exit mobile version