ಬೆಂಗಳೂರು: ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ತೀತಾಘರ್ ರೈಲ್ ಸಿಸ್ಟಂಸ್ ಕಂಪನಿಯಿಂದ ಪೂರೈಕೆಯಾದ ಮೂರನೇ ರೈಲಿನ ಜೋಡಣೆ ಕಾರ್ಯ ಹೆಬ್ಬಗೋಡಿ ಡಿಪೋದಲ್ಲಿ ಭರದಿಂದ ಸಾಗಿದೆ. ಮೇ 2025ರ ಅಂತ್ಯದ ವೇಳೆಗೆ ತಪಾಸಣೆ ಮತ್ತು ಪ್ರಾಯೋಗಿಕ ಸಂಚಾರ ಪೂರ್ಣಗೊಂಡರೆ, ಈ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆಯಿದೆ.
ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಲ್ಲಿ ತೀತಾಘರ್ ಕಂಪನಿಯಿಂದ ತಲಾ ಮೂರು ಬೋಗಿಗಳು ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ತಲುಪಿವೆ. ಈ ಹಿಂದೆ ಚೀನಾದಿಂದ ಬಂದ ಪ್ರೊಟೊಟೈಪ್ ರೈಲು ಮತ್ತು ತೀತಾಘರ್ ಕಳಿಸಿದ ಒಂದು ರೈಲು ಈಗಾಗಲೇ ಹಳದಿ ಮಾರ್ಗದಲ್ಲಿ ಸಿದ್ಧವಾಗಿದೆ. ಈಗ ಬಂದಿರುವ ಎರಡು ಸೆಟ್ ಬೋಗಿಗಳನ್ನು ಜೋಡಿಸಿ, ಸಿಎಂಆರ್‌ಎಸ್ (ಕಮಿಷನರ್ ಆಫ್ ಮೆಟ್ರೋ ರೈಲ್ವೇ ಸೇಫ್ಟಿ) ತಪಾಸಣೆ ಮತ್ತು ಪ್ರಾಯೋಗಿಕ ಸಂಚಾರ ನಡೆಸಲಾಗುವುದು.
ಒಟ್ಟು 19.15 ಕಿಮೀ ಉದ್ದದ ಈ ಮಾರ್ಗದ ಸಿವಿಲ್ ಕಾಮಗಾರಿ ಒಂದು ವರ್ಷದ ಹಿಂದೆಯೇ ಮುಗಿದಿದೆ. ಆದರೆ, ರೈಲುಗಳ ಕೊರತೆಯಿಂದ ಸಂಚಾರ ಆರಂಭವಾಗಿರಲಿಲ್ಲ. ಈ ವಿಳಂಬದ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಕೇವಲ ಮೂರು ರೈಲುಗಳ ಮೂಲಕವೇ ಹಳದಿ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲು ನಿರ್ಧರಿಸಿದೆ.
ಬಿಎಂಆರ್‌ಸಿಎಲ್ ಈಗಾಗಲೇ ದಕ್ಷಿಣ ಭಾರತದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವನ್ನು ತಪಾಸಣೆಗೆ ಆಹ್ವಾನಿಸಿದೆ. ಈ ತಂಡವು ಮೇ ಅಂತ್ಯದಲ್ಲಿ ಬಂದು ತಪಾಸಣೆ ನಡೆಸುವ ಸಾಧ್ಯತೆಯಿದೆ. ತಪಾಸಣೆ ಯಶಸ್ವಿಯಾದರೆ, ಹಳದಿ ಮಾರ್ಗದ ಮೆಟ್ರೋ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ.