ಕಾಲ್ತುಳಿತ ದುರಂತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶಕ್ಕೆ ಆರ್‌ ಅಶೋಕ್ ಮನವಿ

1425 (14)

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಧ್ಯಪ್ರವೇಶಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್ ಒತ್ತಾಯಿಸಿದ್ದಾರೆ. ಈ ಸಂಬಂಧ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತನಿಖೆಯ ಪಾರದರ್ಶಕತೆಯನ್ನು ಖಾತ್ರಿಪಡಿಸಲು ಮೇಲ್ವಿಚಾರಣೆ ವಹಿಸುವಂತೆ ಕೋರಿದ್ದಾರೆ.

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ದಿನದಂದು ಸಂಭವಿಸಿದ ಈ ದುರಂತದಲ್ಲಿ 11 ಯುವಕರು ಪ್ರಾಣ ಕಳೆದುಕೊಂಡಿದ್ದಾರೆ, ಜೊತೆಗೆ 75ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಕಾರ್ಯಕ್ರಮದ ದುರ್ವ್ಯವಸ್ಥೆಯೇ ಈ ದುರ್ಘಟನೆಗೆ ಕಾರಣ ಎಂದು ಆರ್‌.ಅಶೋಕ ಆರೋಪಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ 35,000 ಜನರಾದರೂ, ಉಚಿತ ಪಾಸ್‌ಗಳು ಮತ್ತು ತಪ್ಪು ಘೋಷಣೆಗಳಿಂದಾಗಿ ಅತಿಯಾದ ಜನಸಂದಣಿ ಸೇರಿತು. ಪೊಲೀಸ್‌ ಮತ್ತು ಭದ್ರತಾ ಸಿಬ್ಬಂದಿಯ ಕೊರತೆ, ಆಂಬ್ಯುಲೆನ್ಸ್‌, ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ, ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಈ ತಪ್ಪಿನಲ್ಲಿ ಆರ್‌ಸಿಬಿ, ಡಿಎನ್‌ಎ, ಮತ್ತು ಕ್ರಿಕೆಟ್‌ ಅಸೋಸಿಯೇಶನ್‌ನ ಪಾತ್ರವೂ ಇದೆ ಎಂದು ಆರ್‌.ಅಶೋಕ್ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಆದರೆ, ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳದಿರುವುದು ಸ್ಪಷ್ಟವಾಗಿದೆ. ಯುವಜನರ ಸುರಕ್ಷತೆ ಮತ್ತು ಜೀವನದ ಹಕ್ಕನ್ನು ಕಸಿದುಕೊಂಡ ಈ ಘಟನೆಯನ್ನು ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತವಾಗಿ ತನಿಖೆಗೆ ಒಳಪಡಿಸಬೇಕು ಎಂದು ಆರ್‌.ಅಶೋಕ ಕೋರಿದ್ದಾರೆ.

ತನಿಖೆಯ ಮೂಲಕ ಸರ್ಕಾರಿ ಇಲಾಖೆಗಳು, ಅಧಿಕಾರಿಗಳು, ಮತ್ತು ಖಾಸಗಿ ಸಂಸ್ಥೆಗಳ ಜವಾಬ್ದಾರಿಯನ್ನು ಗುರುತಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯಲು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಸರ್ಕಾರದ ತನಿಖೆಯನ್ನು ಎನ್‌ಎಚ್‌ಆರ್‌ಸಿ ಮೇಲ್ವಿಚಾರಣೆ ಮಾಡಿದರೆ ಮಾತ್ರ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಲು ಸಾಧ್ಯ ಎಂದು ಆರ್‌.ಅಶೋಕ ಒತ್ತಿ ಹೇಳಿದ್ದಾರೆ.

ಈ ದುರಂತವನ್ನು ತಡೆಯಬಹುದಿತ್ತು ಎಂದು ಒಪ್ಪಿಕೊಂಡಿರುವ ಅವರು, ಎನ್‌ಎಚ್‌ಆರ್‌ಸಿ ಮಧ್ಯಪ್ರವೇಶದಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದರ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Exit mobile version