ಬೆಂಗಳೂರಿನಲ್ಲಿ ಹಾಡಹಗಲೇ ಲೇಡಿಸ್ ಪಿಜಿಗೆ ನುಗ್ಗಿದ ಖದೀಮ, ಚಾಕು ತೋರಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

Web

ಹಾಡಹಗಲೇ ದರೋಡೆಕೋರನೊಬ್ಬ ಚಾಕು ತೋರಿಸಿ ಮಹಿಳಾ ಅಧಿಕಾರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಎರಡು ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಈ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಮಹಿಳೆ, 15 ದಿನಗಳ ಹಿಂದಷ್ಟೇ ಈ ಪಿಜಿಗೆ ಸೇರಿಕೊಂಡಿದ್ದರು. ಆಗಸ್ಟ್ 11ರ ಮಧ್ಯಾಹ್ನ ಕೆಲಸ ಮುಗಿಸಿ 3ನೇ ಮಹಡಿಯ ತನ್ನ ಕೊಠಡಿಗೆ ಬಂದಾಗ, ಚಾಕು ಹಿಡಿದ ಖದೀಮ ಒಮ್ಮೆಲೇ ಒಳನುಗ್ಗಿ ಬಾಗಿಲು ಬಡಿದಿದ್ದಾನೆ. ಪಿಜಿಯವರೆಂದು ಭಾವಿಸಿ ಬಾಗಿಲು ತೆರೆದ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ ಆರೋಪಿ, ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಬಳಿಕ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿ, ಎರಡು ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.

ಪಿಜಿ ಮಾಲೀಕನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ
ಇತ್ತೀಚೆಗೆ, ಸೋಲದೇವನಹಳ್ಳಿಯ ಲೇಡಿಸ್ ಪಿಜಿಯೊಂದರಲ್ಲಿ ಪಿಜಿ ಮಾಲೀಕ ಅಶ್ರಫ್‌ ಎಂಬಾತನಿಂದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದೆ ಪಿಜಿಗೆ ಸೇರಿಕೊಂಡಿದ್ದ ವಿದ್ಯಾರ್ಥಿನಿಯನ್ನು ಶನಿವಾರ ತಡರಾತ್ರಿ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯವೆಸಗಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಅಶ್ರಫ್‌ನನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗಳಲ್ಲಿ ಇಂತಹ ಘಟನೆಗಳು ಸಂಚಲನ ಮೂಡಿಸಿವೆ. ಮಹಿಳೆಯರ ಸುರಕ್ಷತೆ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಯಲಹಂಕ ಪೊಲೀಸರು ಎರಡೂ ಪ್ರಕರಣಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Exit mobile version