ಓಯೋ ರೂಂಗೆ ಕರೆಸಿ ಪ್ರಿಯತಮೆಯ ಬರ್ಬರ ಹ*ತ್ಯೆ: ಟೆಕ್ಕಿ ಬಂಧನ

ಪ್ರಿಯತಮನಿಂದಲೇ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ

Befunky collage 2025 06 09t131416.319

ಬೆಂಗಳೂರು: ಬೆಂಗಳೂರಿನ ಕೆಂಗೇರಿಯಲ್ಲಿ ಆಘಾತಕಾರಿ ಕೊಲೆ ಘಟನೆಯೊಂದು ನಡೆದಿದ್ದು, ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ (25) ಎಂಬಾತ ತನ್ನ ಪ್ರಿಯತಮೆಯಾದ ಹರಿಣಿ (36) ಎಂಬ ವಿವಾಹಿತ ಮಹಿಳೆಯನ್ನು ಓಯೋ ರೂಂಗೆ ಕರೆದು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಹರಿಣಿ, ಇಬ್ಬರು ಮಕ್ಕಳ ತಾಯಿಯಾಗಿದ್ದು, ಕೆಂಗೇರಿ ನಿವಾಸಿಯಾಗಿದ್ದಳು. ಯಶಸ್ ಕೂಡ ಕೆಂಗೇರಿಯವನೇ ಆಗಿದ್ದಾನೆ. ಇಬ್ಬರೂ ಜಾತ್ರೆಯೊಂದರಲ್ಲಿ ಪರಿಚಯವಾಗಿದ್ದರು. ಹರಿಣಿಯು ಯಶಸ್‌ನ ಸ್ನೇಹಿತನ ಸಂಬಂಧಿಯಾಗಿದ್ದಳು. ಕೆಲ ತಿಂಗಳುಗಳಿಂದ ಇವರಿಬ್ಬರ ನಡುವೆ ಒಡನಾಟ ಹೆಚ್ಚಾಗಿತ್ತು, ಇದರಿಂದಾಗಿ ಇವರ ಮನೆಯಲ್ಲಿ ಗಲಾಟೆಯೂ ನಡೆದಿತ್ತು. ಈ ವಿಷಯಕ್ಕೆ ಸಂಬಂಧಿಸಿ, ಹರಿಣಿಯು ಯಶಸ್‌ನಿಂದ ದೂರವಿರಲು ಯತ್ನಿಸಿದ್ದಳು.

ಕಳೆದ ಶುಕ್ರವಾರ ಸಂಜೆ, ಯಶಸ್, ಹರಿಣಿಯನ್ನು “ನಿನ್ನ ಜೊತೆ ಮಾತಾಡಬೇಕು” ಎಂದು ಪೂರ್ಣಪ್ರಜ್ಞ ಲೇಔಟ್‌ನಲ್ಲಿರುವ ಓಯೋ ರೂಂಗೆ ಕರೆದಿದ್ದಾನೆ. ಹರಿಣಿ ಯಾರಿಗೂ ತಿಳಿಸದೆ ಭೇಟಿಯಾಗಲು ತೆರಳಿದ್ದಳು. ಆ ಸಂದರ್ಭದಲ್ಲಿ, ಹರಿಣಿಯು “ನಾನು ಇನ್ನು ಮುಂದೆ ನಿನ್ನ ಸಹವಾಸಕ್ಕೆ ಬರುವುದಿಲ್ಲ, ನನ್ನನ್ನು ಬಿಟ್ಟುಬಿಡು” ಎಂದಿದ್ದಾಳೆ. ಇದಕ್ಕೆ ಕೋಪಗೊಂಡ ಯಶಸ್, “ನೀನು ನನಗೆ ಸಿಗದಿದ್ದರೆ ಇನ್ಯಾರಿಗೂ ಸಿಗಬಾರದು” ಎಂದು ಚಾಕುವಿನಿಂದ ಹಲವಾರು ಬಾರಿ ಇರಿದು ಕೊಲೆ ಮಾಡಿದ್ದಾನೆ.

ಈ ಘಟನೆಯ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ಯಶಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version