ಚೀಟಿ ಹೆಸರಲ್ಲಿ ಜನರಿಂದ ಲಕ್ಷ ಲಕ್ಷ ಹಣ ಸಂಗ್ರಹಿಸಿ ರಾತ್ರೋರಾತ್ರಿ ಪರಾರಿಯಾದ ದಂಪತಿ!

200ಕ್ಕೂ ಹೆಚ್ಚು ಜನರಿಗೆ ವಂಚಸಿ ಪರಾರಿ

1 (14)

ಬೆಂಗಳೂರಿನ ಪುಟ್ಟೇನಹಳ್ಳಿ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಚೀಟಿ ವ್ಯವಹಾರದ ಹೆಸರಲ್ಲಿ ದಂಪತಿಯೊಬ್ಬರು ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ವಂಚಿಸಿ ರಾತ್ರೋರಾತ್ರಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಸುಧಾ ಮತ್ತು ಸಿದ್ದಪ್ಪಾಜಿ ಎಂಬ ದಂಪತಿ, ಚೀಟಿ ವ್ಯವಹಾರದ ಮೂಲಕ ಜನರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಪರಾರಿಯಾಗಿದ್ದಾರೆ.

ಈ ದಂಪತಿಯನ್ನು ನಂಬಿ ಹಣ ಹೂಡಿದ್ದ ಜನರು ಇದೀಗ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸುಧಾ ಮತ್ತು ಸಿದ್ದಪ್ಪಾಜಿ 5 ಲಕ್ಷ ಮತ್ತು 10 ಲಕ್ಷ ರೂಪಾಯಿಗಳ ಚೀಟಿ ವ್ಯವಹಾರ ನಡೆಸುತ್ತಿದ್ದರು. 5 ಲಕ್ಷದ ಚೀಟಿಗೆ ತಿಂಗಳಿಗೆ 12,500 ರೂ. ಮತ್ತು 10 ಲಕ್ಷದ ಚೀಟಿಗೆ 25,000 ರೂ. ಕಂತುಗಳನ್ನು ಸಂಗ್ರಹಿಸುತ್ತಿದ್ದರು. ಆರಂಭದಲ್ಲಿ ಕೆಲವರಿಗೆ ಹಣ ವಾಪಸ್ ಮಾಡಿ, ಜನರಲ್ಲಿ ವಿಶ್ವಾಸ ಗಳಿಸಿದ್ದ ಈ ದಂಪತಿ, ಬಳಿಕ 200ಕ್ಕೂ ಹೆಚ್ಚು ಜನರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿದ್ದಾರೆ.

“ನಾವು ಮೋಸ ಮಾಡುವುದಿಲ್ಲ, ಯಾವಾಗ ಬೇಕಾದರೂ ಹಣ ಪಡೆಯಬಹುದು” ಎಂದು ಜನರನ್ನು ಒಪ್ಪಿಸಿದ್ದ ದಂಪತಿ, ಯಾರಿಗೂ ತಿಳಿಸದೇ ಮನೆ ಖಾಲಿ ಮಾಡಿ, ರಾತ್ರಿಯೇ ಪರಾರಿಯಾಗಿದ್ದಾರೆ. ವಂಚನೆಗೊಳಗಾದ ಜನರು ತಕ್ಷಣವೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಘಟನೆಯು ಜರಗನಹಳ್ಳಿ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಚೀಟಿ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Exit mobile version