ಬೆಂಗಳೂರು: ನಗರದಲ್ಲಿ ಇಂದು (ಸೆಪ್ಟೆಂಬರ್ 06) ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚಾಮರಾಜಪೇಟೆ, ಕೆಆರ್ ಮಾರ್ಕೆಟ್, ಚಿಕ್ಕಪೇಟೆ, ಮೆಜೆಸ್ಟಿಕ್, ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮತ್ತು ಹೆಸರಘಟ್ಟ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು, ವಾಹನ ಸವಾರರು ಮತ್ತು ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು.
ರಸ್ತೆಗಳಲ್ಲಿ ಟ್ರಾಫಿಕ್ ಜಾಮ್
ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಕೆಲಸಕ್ಕೆ ತೆರಳಿದವರು ಮತ್ತು ವಾರಾಂತ್ಯದಲ್ಲಿ ಸುತ್ತಾಡಲು ಹೊರಟವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ವಿಶೇಷವಾಗಿ ಮೆಜೆಸ್ಟಿಕ್ ಮತ್ತು ಪೀಣ್ಯಾ ಪ್ರದೇಶಗಳಲ್ಲಿ ವಾಹನಗಳ ಸಾಲು ಉದ್ದವಾಗಿದ್ದು, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಸ್ತೆಯಲ್ಲಿ ನಿಂತ ನೀರಿನಿಂದಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾರಾಂತ್ಯದ ಸಂಭ್ರಮದಲ್ಲಿ ಮುಳುಗಿದ್ದವರಿಗೆ ಈ ಧಾರಾಕಾರ ಮಳೆಯು ಆತಂಕವನ್ನು ತಂದಿದೆ. ಕೆಲವು ಕಡೆ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಪಾದಾಚಾರಿಗಳಿಗೂ ಓಡಾಟ ಕಷ್ಟಕರವಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಜನರಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ರಸ್ತೆ ಸಂಚಾರದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.