ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಸ್ ಸೋರಿಕೆಯಿಂದ ಭಯಾನಕ ಸ್ಫೋಟ

ಬೆಂಗಳೂರಿನ ಯಲಹಂಕದ ಚೌಡೇಶ್ವರಿ ಲೇಔಟ್‌ನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಗ್ಯಾಸ್ ಸೋರಿಕೆಯಿಂದ ಭೀಕರ ಸ್ಫೋಟ ನಡೆದಿದ್ದು, ಮನೆಯ ಗೋಡೆಗಳು ಛಿದ್ರವಾಗಿವೆ. ಘಟನೆಯಲ್ಲಿ ಮನೆಯಲ್ಲಿದ್ದ ಪತಿ-ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತೀಚೆಗೆ ಮದುವೆಯಾಗಿದ್ದ ಬಾಗೇಪಲ್ಲಿ ಮೂಲದ ದಂಪತಿ ಈ ಮನೆಯಲ್ಲಿ ವಾಸಿಸುತ್ತಿದ್ದರು. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಒಡೆದು ಬಿದ್ದಿವೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಯಲಹಂಕ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕಾರಣಗಳ ತನಿಖೆ ಆರಂಭಿಸಿದ್ದಾರೆ.

ಸ್ಫೋಟದ ನಂತರ ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿ ದಂಪತಿಯನ್ನು ರಕ್ಷಿಸಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಗ್ಯಾಸ್ ಸೋರಿಕೆ ಮತ್ತು ಸಿಲಿಂಡರ್ ಸ್ಫೋಟಗಳು ಪದೇ ಪದೇ ಸಂಭವಿಸುತ್ತಿರುವುದರಿಂದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ಮುಂದುವರೆಸಿದ್ದು, ಸ್ಫೋಟದ ನಿಖರ ಕಾರಣ ಶೀಘ್ರದಲ್ಲೇ ಬಹಿರಂಗವಾಗುವ ನಿರೀಕ್ಷೆಯಿದೆ.

Exit mobile version