ಬೆಂಗಳೂರು: ಭಾರೀ ಮಳೆಯಿಂದ ಬೆಂಗಳೂರು ಜಲಾವೃತಗೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇದು ಗ್ರೇಟರ್ ಬೆಂಗಳೂರು ಅಲ್ಲ, ಲೂಟಿಕೋರರ ಬೆಂಗಳೂರು,” ಎಂದು ಅವರು ವ್ಯಂಗ್ಯವಾಡಿದ್ದಾರೆ. ಶನಿವಾರ ಮತ್ತು ಭಾನುವಾರ ರಾತ್ರಿಯಿಡೀ ಸುರಿದ ಮಳೆಯಿಂದ ನಗರದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕುಮಾರಸ್ವಾಮಿ ಖಂಡಿಸಿದ್ದಾರೆ.
ಮೇ 15, 2025 ರಂದು ಜಾರಿಗೆ ಬಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಉದ್ದೇಶವನ್ನು ಸರ್ಕಾರ ಸಾಕಾರಗೊಳಿಸಲು ವಿಫಲವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. “ಭಾರೀ ಮಳೆಯಾದರೆ ಬೆಂಗಳೂರು ಮುಳುಗುತ್ತದೆ, ಲಘು ಮಳೆಯಾದರೆ ತೇಲುತ್ತದೆ,” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ. ಗುಂಡಿಗಳಿಂದ ಕೂಡಿದ ರಸ್ತೆಗಳು, ತೆರೆದ ಚರಂಡಿಗಳು, ಮತ್ತು ಪದೇ ಪದೇ ಉಂಟಾಗುವ ಪ್ರವಾಹವು ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಡಿಎಸ್ ಟೀಕೆ
ಜೆಡಿಎಸ್ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಿ ಸಮರ್ಥರಲ್ಲ ಎಂದು ಜೆಡಿಎಸ್ ಆರೋಪಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, “ಬೆಂಗಳೂರಿನಲ್ಲಿ ಚರಂಡಿಗಳಲ್ಲಿ ಹೂಳು ತುಂಬಿದೆ, ಮೋರಿಗಳನ್ನು ಸ್ವಚ್ಛಗೊಳಿಸಿಲ್ಲ. ಒಂದೆರಡು ಗಂಟೆ ಮಳೆಗೆ ರಸ್ತೆಗಳು ಕೆರೆಯಾಗುತ್ತವೆ. ಕಾಂಗ್ರೆಸ್ ಸರ್ಕಾರದಿಂದ ಸಿಲಿಕಾನ್ ಸಿಟಿಯ ಮಾನ ವಿಶ್ವಮಟ್ಟದಲ್ಲಿ ಹರಾಜಾಗುತ್ತಿದೆ,” ಎಂದು ಕಿಡಿಕಾರಿದೆ.
‘ @DKShivakumar ನೀವು ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್.@INCKarnataka ದುರಾಡಳಿತದಲ್ಲಿ ಬೆಂಗಳೂರಿನ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ಅವರು, ಮನೆ ಸರಿಯಾಗಿ ಕಟ್ಟಿಲ್ಲ ಎಂದು ಉಡಾಫೆ ಮಾತು ಆಡುತ್ತಿರಾ.ಸಿಲಿಕಾನ್…
— Janata Dal Secular (@JanataDal_S) May 19, 2025