ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಇಂದು ಬೆಳ್ಳಂಬೆಳಗ್ಗೆ (ಗುರುವಾರ) ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಆಘಾತ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಅವರ ಮನೆಗಳು ಸೇರಿದಂತೆ ಬೆಂಗಳೂರಿನ ಐದು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಈ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಸುಬ್ಬಾರೆಡ್ಡಿ ಮತ್ತು ಅವರ ಸಂಬಂಧಿಕರಿಗೆ ಸಂಬಂಧಿಸಿದ ಆಸ್ತಿಗಳು ಹಾಗೂ ಉದ್ಯಮ ಪಾಲುದಾರರ ಆಸ್ತಿಗಳ ಮೇಲೆ ಇಡಿ ಗಮನ ಹರಿಸಿದೆ. ಮಲೇಷ್ಯಾ, ಹಾಂಕಾಂಗ್, ಮತ್ತು ಜರ್ಮನಿಯಲ್ಲಿ ಶಾಸಕ ಸುಬ್ಬಾರೆಡ್ಡಿ ಆಸ್ತಿಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ವಿದೇಶಿ ಬ್ಯಾಂಕ್ ಖಾತೆಗಳು, ವಿದೇಶಿ ವ್ಯವಹಾರಗಳಲ್ಲಿ ಹೂಡಿಕೆ, ಮತ್ತು ಇತರ ಆರ್ಥಿಕ ವಹಿವಾಟುಗಳ ಕುರಿತು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ದಾಳಿಯು ಸುಬ್ಬಾರೆಡ್ಡಿ ಅವರ ಕುಟುಂಬ ಸದಸ್ಯರ ಆಸ್ತಿಗಳು ಮತ್ತು ಅವರ ಉದ್ಯಮ ಸಂಬಂಧಿತ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿದೆ. ಇಡಿ ತಂಡವು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುವ ಪ್ರಯತ್ನದಲ್ಲಿದೆ.