ಗಾಂಜಾ ನಶೆಯ ಜಾಲಕ್ಕೆ ಸಿಕ್ಕಿ ರೈಲ್ವೇ ಹಳಿ ಮೇಲೆ ಬಿದ್ದು ಎಡಗೈ ಕತ್ತರಿಸಿಕೊಂಡ ಯುವಕನೊಬ್ಬ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನಿಂದ ಜಿಗಿದು ಓಡಾಡಿರುವ ಆಘಾತಕಾರಿ ಘಟನೆ ದೇವನಹಳ್ಳಿ ತಾಲೂಕಿನ ಕುಂಬಾರ ಬೀದಿಯಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ದಿಲೀಪ್ ಎಂಬಾತ ತಡರಾತ್ರಿ ಗಾಂಜಾ ಸೇವಿಸಿದ ಅಮಲಿನಲ್ಲಿ ರೈಲ್ವೇ ಹಳಿ ಮೇಲೆ ಬಿದ್ದಿದ್ದ. ಆ ಸಮಯದಲ್ಲಿ ಹಾದುಹೋಗುತ್ತಿದ್ದ ರೈಲು ಅವನ ಎಡಗೈ ಮೇಲೆ ಹರಿದು ತುಂಡಾಗಿಸಿದೆ. ನೋವನ್ನು ಮರೆತು ನಶೆಯ ಮತ್ತಿನಲ್ಲಿ ಯುವಕ ಎದ್ದು ನಿಂತು ಓಡಾಡಿದ್ದಾನೆ.
ಸ್ಥಳೀಯರು ಗಮನಿಸಿ ಆಂಬ್ಯುಲೆನ್ಸ್ ಕರೆದೊಯ್ಯುತ್ತಿದ್ದ ವೇಳೆ ರಸ್ತೆ ಮಧ್ಯೆಯೇ ಜಿಗಿದು ತುಂಡಾದ ಕೈಯೊಂದಿಗೆ ದೇವನಹಳ್ಳಿ ಹಳೇ ಬಸ್ ನಿಲ್ದಾಣದಿಂದ ಕುಂಬಾರ ಬೀದಿಯ ಮನೆವರೆಗೆ ಓಡಿದ್ದಾನೆ. ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿ ಅವನನ್ನು ಪತ್ತೆಹಚ್ಚಿದ್ದಾರೆ.
ಆದರೆ ನಶೆಯಲ್ಲಿದ್ದ ಯುವಕ ಆಸ್ಪತ್ರೆಗೆ ಹೋಗಲು ನಿರಾಕರಿಸಿ ಮೂರು ಬಾರಿ ಆಂಬ್ಯುಲೆನ್ಸ್‌ನಿಂದ ಕೆಳಗಿಳಿದು ಓಡಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಬಲವಂತವಾಗಿ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬ್ಯಾಂಡೇಜ್ ಹಾಕಿಸಿಕೊಳ್ಳಲೂ ಮೊಂಡಾಟ ಮಾಡಿದ್ದ ಯುವಕನನ್ನು ಪೊಲೀಸರು ಬೈದು ಚಿಕಿತ್ಸೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಮಾದಕ ವಸ್ತುಗಳ ಸೇವನೆಯ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ನಶೆಯ ಮತ್ತಿನಲ್ಲಿ ನೋವನ್ನೇ ಮರೆತು ಓಡಾಡಿದ ಯುವಕನ ಕೃತ್ಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
