ಬೆಂಗಳೂರಿನಲ್ಲಿದ್ದಾರೆ ಡೇಟಿಂಗ್ ಆಪ್ ಡೇಂಜರ್ ಸುಂದರಿಯರು: ಯುವಕರಿಗೆ ಬೆತ್ತಲೆ ಕರೆ ಮಾಡಿ, ಲಕ್ಷ, ಲಕ್ಷ ಲೂಟಿ!

BeFunky collage 2026 01 09T144415.043

ಆನ್‌ಲೈನ್ ಡೇಟಿಂಗ್ ಆಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಂದರಿಯರೊಂದಿಗೆ ಪರಿಚಯ ಮಾಡಿಕೊಳ್ಳುವ ಆಸೆಯಲ್ಲಿ ಬೀಳುವ ಯುವಕರು ಭಾರೀ ವಂಚನೆಗೆ ಒಳಗಾಗುತ್ತಿದ್ದಾರೆ. ಬೆತ್ತಲೆ ವಿಡಿಯೊ ಕರೆಗಳ ಮೂಲಕ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ ಬ್ಯಾಕ್‌ಮೇಲ್ ಮಾಡುವುದು, ಕಾಲ್ ಗರ್ಲ್ ಬುಕಿಂಗ್ ಹೆಸರಿನಲ್ಲಿ ಸುಲಿಗೆ, ಷೇರು ಮಾರುಕಟ್ಟೆ ಹೂಡಿಕೆ ಆಮಿಷ ತೋರಿಸಿ ದೋಚುವುದು. ಇಂತಹ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಇತ್ತೀಚೆಗೆ ಮೂರು ಪ್ರತ್ಯೇಕ ಘಟನೆಗಳಲ್ಲಿ ಯುವಕರು ಒಟ್ಟು 44 ಲಕ್ಷಕ್ಕೂ ಹೆಚ್ಚು ರೂಪಾಯಿ ಕಳೆದುಕೊಂಡಿದ್ದಾರೆ. ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊದಲ ಪ್ರಕರಣದಲ್ಲಿ ಮಾರತ್‌ಹಳ್ಳಿ ನಿವಾಸಿ 26 ವರ್ಷದ ಖಾಸಗಿ ಉದ್ಯೋಗಿ ಜನವರಿ 3ರಂದು ಟಿಂಡರ್ ಡೇಟಿಂಗ್ ಆಪ್ ಡೌನ್‌ಲೋಡ್ ಮಾಡಿ ಪ್ರೊಫೈಲ್ ರಚಿಸಿದ್ದ. ಅಲ್ಲಿ ‘ಸಾನ್ವಿ’ ಹೆಸರಿನ ಯುವತಿ ಪರಿಚಯವಾಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಅದೇ ದಿನ ವಾಟ್ಸಾಪ್ ವಿಡಿಯೊ ಕರೆಯಲ್ಲಿ ಸಾನ್ವಿ ಬೆತ್ತಲೆಯಾಗಿ ಕಾಣಿಸಿಕೊಂಡು ಯುವಕನನ್ನು ಸಹ ಬೆತ್ತಲೆಯಾಗುವಂತೆ ಪ್ರೇರೇಪಿಸಿದ್ದಳು. ಆ ಸಂದರ್ಭದಲ್ಲಿ ಯುವಕನ ಬೆತ್ತಲೆ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಮರುದಿನ ವಿಡಿಯೊ ಕಳುಹಿಸಿ ಬೆದರಿಕೆ ಹಾಕಿದ್ದ ಸಾನ್ವಿ, ಹಣ ಕೊಡದಿದ್ದರೆ ವೈರಲ್ ಮಾಡುವುದಾಗಿ ಧಮಕಿ ನೀಡಿದ್ದಳು. ಹೆದರಿದ ಯುವಕ ಹಂತಹಂತವಾಗಿ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 5.14 ಲಕ್ಷ ರೂಪಾಯಿ ವರ್ಗಾಯಿಸಿದ್ದ. ಮತ್ತಷ್ಟು ಹಣಕ್ಕೆ ಒತ್ತಡ ಹೇರಿದಾಗ ಸಂತ್ರಸ್ತ ಪೊಲೀಸರ ಮೊರೆ ಹೋಗಿದ್ದಾರೆ.

ಎರಡನೇ ಪ್ರಕರಣದಲ್ಲಿ 25 ವರ್ಷದ ಯುವಕ ಜನವರಿ 2ರಂದು ಟೆಲಿಗ್ರಾಮ್‌ನಲ್ಲಿ ‘ಡೇಟಿಂಗ್ ಗರ್ಲ್ಸ್’ ಗ್ರೂಪ್‌ಗೆ ಸೇರಿಕೊಂಡಿದ್ದ. ಅಲ್ಲಿ ಅಪರಿಚಿತ ವ್ಯಕ್ತಿ ಹುಡುಗಿಯ ಫೋಟೋ ಕಳುಹಿಸಿ ಮುಂಗಡಕ್ಕೆ 2,500 ರೂಪಾಯಿ ಪಾವತಿಸುವಂತೆ ಒತ್ತಾಯಿಸಿದ್ದ. ಹಣ ಕೊಟ್ಟ ನಂತರ ಮನಸ್ಸು ಬದಲಾಯಿಸಿದ ಯುವಕ ಹಣ ವಾಪಸ್ ಕೇಳಿದಾಗ, ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡುವ ಬೆದರಿಕೆ ಬಂದಿದೆ. ಆತಂಕಗೊಂಡ ಯುವಕ ಹಂತಹಂತವಾಗಿ 1.47 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ಮೂರನೇ ಘಟನೆಯಲ್ಲಿ 37 ವರ್ಷದ ವ್ಯಕ್ತಿ ಡೇಟಿಂಗ್ ಆಪ್‌ನಲ್ಲಿ ‘ಹರ್ಷಿತಾ’ ಹೆಸರಿನ ಯುವತಿಯೊಂದಿಗೆ ಪರಿಚಯವಾಗಿದ್ದ. ಫೋನ್‌ನಲ್ಲಿ ಮಾತನಾಡುತ್ತಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಎಂದು ಆಮಿಷ ತೋರಿಸಿದ್ದಳು. ನಂಬಿದ ಸಂತ್ರಸ್ತ ಹಂತಹಂತವಾಗಿ ಬೇರೆ ಬೇರೆ ಖಾತೆಗಳಿಗೆ 37.99 ಲಕ್ಷ ರೂಪಾಯಿ ವರ್ಗಾಯಿಸಿದ್ದ. ನಂತರ ಮೋಸಕ್ಕೊಳಗಾಗಿರುವುದು ತಿಳಿದು ಪೊಲೀಸರಲ್ಲಿ ದೂರು ನೀಡಿದ್ದಾರೆ.

ಈ ಎಲ್ಲಾ ಪ್ರಕರಣಗಳು ವೈಟ್‌ಫೀಲ್ಡ್ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸೈಬರ್ ಕ್ರೈಂ ಪೊಲೀಸರು ಆನ್‌ಲೈನ್ ಡೇಟಿಂಗ್ ಮತ್ತು ಅಪರಿಚಿತರೊಂದಿಗೆ ಖಾಸಗಿ ಮಾತುಕತೆಯಲ್ಲಿ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಬೆದರಿಕೆಗೊಳಗಾದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.

ಆನ್‌ಲೈನ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಿಚಿತರಿಗೆ ವೈಯಕ್ತಿಕ ಮಾಹಿತಿ ಅಥವಾ ದೃಶ್ಯಗಳನ್ನು ಹಂಚಿಕೊಳ್ಳದಿರಿ. ಹೂಡಿಕೆ ಆಮಿಷಕ್ಕೆ ಮರುಳಾಗದಿರಿ. ಸೈಬರ್ ಸುರಕ್ಷತೆಯನ್ನು ಮುಖ್ಯವಾಗಿಸಿಕೊಳ್ಳಿ.

Exit mobile version