ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬಿ ಖಾತಾದಾರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಎ ಖಾತಾ ಮತ್ತು ಬಿ ಖಾತಾ ಗೊಂದಲಕ್ಕೆ ತೆರೆ ಎಳೆಯಲು ಸಂಪುಟವು ಒಪ್ಪಿಗೆ ನೀಡಿದ್ದು, ಬಿ ಖಾತಾಗಳಿಗೆ ಎ ಖಾತಾದಂತೆ ಅಧಿಕೃತ ಮಾನ್ಯತೆ ನೀಡಲು ತೀರ್ಮಾನಿಸಿದೆ.
2020ರ ಮೇ 22ರಿಂದ ಜಾರಿಗೆ ಬಂದಂತೆ, 2024ರ ಸೆಪ್ಟೆಂಬರ್ 30ರವರೆಗೆ ಇರುವ ಬಿ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಗಳಿಗೆ ಅಧಿಕೃತ ಖಾತೆಗಳೆಂದು ಪರಿಗಣಿಸಲಾಗುವುದು. ಇದರಿಂದ ಬಿಬಿಎಂಪಿ ಪ್ಲಾನಿಂಗ್, ಒಸಿ, ಬ್ಯಾಂಕ್ ಲೋನ್ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಮಾನದಂಡಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ.
ಇದೇ ಸಂದರ್ಭದಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ಪಾಲಿಕೆಗಳ ರಚನೆಗೆ ಸಂಪುಟವು ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಈ ಪಾಲಿಕೆಗಳ ವ್ಯಾಪ್ತಿ ಮತ್ತು ಗಡಿಗಳ ಕುರಿತು ಗೊಂದಲವಿದ್ದು, ಶಾಸಕರ ಸಭೆ ಕರೆದು ಇದನ್ನು ಅಂತಿಮಗೊಳಿಸಲಾಗುವುದೆಂದು ಸಂಪುಟವು ಸೂಚಿಸಿದೆ.
ಜೊತೆಗೆ, ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದ್ದು, ಎನ್‌ಟಿಪಿಸಿ ಗುರುತಿಸಿರುವ ಸಂಭಾವ್ಯ ಸ್ಥಳಗಳ ಪರಿಶೀಲನೆಗೆ ನಿರ್ಧಾರ ಕೈಗೊಂಡಿದೆ. ಕರ್ನಾಟಕದಾದ್ಯಂತ ಸಾಧ್ಯವಿರುವ ಸ್ಥಳಗಳನ್ನು ಅಧ್ಯಯನ ಮಾಡಲು ಸಂಪುಟವು ತೀರ್ಮಾನಿಸಿದೆ. ಎನ್‌ಟಿಪಿಸಿಯಿಂದ ಮೂರು ಸ್ಥಳಗಳನ್ನು ಸೂಚಿಸಲಾಗಿದ್ದರೂ, ರಾಜ್ಯದಾದ್ಯಂತ ಒಟ್ಟಾರೆ ಸ್ಥಳಗಳ ಪರಿಶೀಲನೆಗೆ ಕ್ಯಾಬಿನೆಟ್ ಒತ್ತು ನೀಡಿದೆ.