ಬೆಂಗಳೂರು, (ಆಗಸ್ಟ್ 8): ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ (ಕಾಳೇನ ಅಗ್ರಹಾರ–ನಾಗವಾರ) ಕಾರಿಡಾರ್‌ನ ವಾಣಿಜ್ಯ ಸಂಚಾರ ಆರಂಭಿಸುವ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ಈ ಮಾರ್ಗದಲ್ಲಿ ಸಂಚರಿಸಲಿರುವ ಹೊಸ ಮೆಟ್ರೋ ರೈಲುಗಳ ತಾಂತ್ರಿಕ ಹಾಗೂ ಸುರಕ್ಷತಾ ತಪಾಸಣೆಯನ್ನು ಆಗಸ್ಟ್ 12ರಿಂದ 14ರವರೆಗೆ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮನವಿ ಮೇರೆಗೆ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು (CCRS) ರೈಲುಗಳ ರೋಲಿಂಗ್ ಸ್ಟಾಕ್ ತಪಾಸಣೆ ನಡೆಸಲಿದ್ದಾರೆ. ಪಿಂಕ್ ಲೈನ್‌ಗಾಗಿ BEML ಪೂರೈಸಿರುವ ಹೊಸ ರೈಲು ಸೆಟ್‌ಗಳನ್ನು ಕೊತ್ತನೂರು ಡಿಪೋದಲ್ಲಿ ಪರಿಶೀಲಿಸಲಾಗುತ್ತದೆ.
ತಪಾಸಣೆ ವೇಳೆ ರೈಲುಗಳ ಬ್ರೇಕಿಂಗ್ ವ್ಯವಸ್ಥೆ, ಸಿಗ್ನಲಿಂಗ್ ವ್ಯವಸ್ಥೆಯೊಂದಿಗಿನ ಸಮನ್ವಯತೆ ಹಾಗೂ ಸ್ವಯಂಚಾಲಿತ ಚಾಲನಾ ಸಾಮರ್ಥ್ಯ ಸೇರಿದಂತೆ ಹಲವು ಪ್ರಮುಖ ತಾಂತ್ರಿಕ ಅಂಶಗಳನ್ನು ತಜ್ಞರು ಪರಿಶೀಲಿಸಲಿದ್ದಾರೆ. ರೈಲುಗಳ ಸುರಕ್ಷತೆ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯವನ್ನು ಖಚಿತಪಡಿಸಿಕೊಂಡ ಬಳಿಕ ಮುಂದಿನ ಹಂತದ ಅನುಮೋದನೆ ಪ್ರಕ್ರಿಯೆ ನಡೆಯಲಿದೆ.
ಪಿಂಕ್ ಲೈನ್ ಮೂಲಸೌಕರ್ಯದ ಅಂತಿಮ ಪರಿಶೀಲನೆ
ರೈಲುಗಳ ಪ್ರಾಥಮಿಕ ತಪಾಸಣೆ ಪೂರ್ಣಗೊಂಡ ಬಳಿಕ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಪಿಂಕ್ ಲೈನ್‌ನ ಸಂಪೂರ್ಣ ಮೂಲಸೌಕರ್ಯವನ್ನು ಪರಿಶೀಲಿಸಲಿದ್ದಾರೆ. ಪ್ರಾಯೋಗಿಕ ಸಂಚಾರದ ವೇಳೆ ಸಿಗ್ನಲಿಂಗ್ ಮತ್ತು ಟೆಲಿಕಾಂ ವ್ಯವಸ್ಥೆ, ಸುರಕ್ಷತಾ ಜಾಲ, ನಿಲ್ದಾಣಗಳು, ಟ್ರ್ಯಾಕ್, ವಿದ್ಯುತ್ ಪೂರೈಕೆ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಪರಿಶೀಲಿಸಲಾಗುತ್ತದೆ.
ಅಲ್ಲದೆ ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕಲ್ಪಿಸಲಾಗಿರುವ ನಿರ್ಗಮನ ವ್ಯವಸ್ಥೆಗಳನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಅಗತ್ಯ ಸುರಕ್ಷತಾ ಮಾನದಂಡಗಳು ಪೂರ್ಣಗೊಂಡ ಬಳಿಕವೇ ವಾಣಿಜ್ಯ ಸಂಚಾರಕ್ಕೆ ಅಂತಿಮ ಅನುಮತಿ ದೊರೆಯಲಿದೆ.
21.3 ಕಿ.ಮೀ ಉದ್ದದ ಪಿಂಕ್ ಲೈನ್
ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್ ಒಟ್ಟು 21.3 ಕಿಲೋಮೀಟರ್ ಉದ್ದವಿದೆ. ಇದರಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 13.8 ಕಿ.ಮೀ ಭೂಗತ ಮಾರ್ಗ ಸೇರಿದೆ.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಇರುವ ಎತ್ತರಿಸಿದ ಭಾಗದಲ್ಲಿ ಆರು ನಿಲ್ದಾಣಗಳಿವೆ. ಈ ಮಾರ್ಗವು ಈಗಾಗಲೇ ಆರ್‌ಡಿಎಸ್‌ಒ ವೇಗ ಪರೀಕ್ಷೆಯಲ್ಲಿ ಗಂಟೆಗೆ 90 ಕಿ.ಮೀ ವೇಗದ ಪ್ರಮಾಣಪತ್ರ ಪಡೆದುಕೊಂಡಿದೆ.
ಅಧಿಕಾರಿಗಳ ಪ್ರಕಾರ, CMRS ನಿಂದ ಅಂತಿಮ ಸುರಕ್ಷತಾ ಅನುಮೋದನೆ ದೊರೆತ ಬಳಿಕ ಎತ್ತರಿಸಿದ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಗತ್ಯ ಅನುಮೋದನೆಗಳು ದೊರೆಯುವ ನಿರೀಕ್ಷೆಯಿದೆ. ಉಳಿದ ಭೂಗತ ಕಾಮಗಾರಿಗಳು ಸಹ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಸಂಪೂರ್ಣ ಮಾರ್ಗ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
