ಬೆಂಗಳೂರು(ಜುಲೈ,10) : ಬೆಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಏರಿಕೆಯಾಗುತ್ತಿರುವುದರಿಂದ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಜೊತೆಯಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳೂ ಹೆಚ್ಚುತ್ತಿದ್ದು, ನಗರ ಸಂಚಾರಿ ಪೊಲೀಸರಿಗೆ ಪ್ರತಿದಿನದ ಟ್ರಾಫಿಕ್ ನಿರ್ವಹಣೆ ದೊಡ್ಡ ಸವಾಲಾಗಿದೆ. ವಿಶೇಷವಾಗಿ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಮಾತ್ರವಲ್ಲ, ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಸಮಸ್ಯೆಯನ್ನು ನಿಯಂತ್ರಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಅಡಿಯಲ್ಲಿ ಸ್ವಯಂಚಾಲಿತ ನಿಗಾ ವ್ಯವಸ್ಥೆಯನ್ನು ನಗರದ ಅನೇಕ ಪ್ರಮುಖ ಜಂಕ್ಷನ್‌ಗಳು ಮತ್ತು ಸ್ಥಳಗಳಲ್ಲಿ ಅಳವಡಿಸಿದ್ದಾರೆ. ಈ ವ್ಯವಸ್ಥೆಯ ಮೂಲಕ ಸಂಚಾರ ನಿಯಮ ಉಲ್ಲಂಘನೆಯ ಸುಮಾರು ಶೇ.97 ರಷ್ಟು ಪ್ರಕರಣಗಳನ್ನು ನವೀನ ತಂತ್ರಜ್ಞಾನದ ಸಹಾಯದಿಂದಲೇ ದಾಖಲಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಹಾಗೂ ಇತರೆ ಯೋಜನೆಗಳಡಿ ಅಳವಡಿಸಲಾದ ಕಣ್ಗಾವಲು ಕ್ಯಾಮೆರಾಗಳನ್ನು ಬಳಸಿ ಸಂಪರ್ಕರಹಿತ ನಿಯಮ ಜಾರಿ ಕ್ರಮವೂ ಯಶಸ್ವಿಯಾಗಿ ಜಾರಿಯಲ್ಲಿದೆ.
ಡಿಜಿಟಲ್ ಕ್ಯಾಮೆರಾ ಮತ್ತು ಮೊಬೈಲ್ ಫೋನ್‌ಗಳ ಮೂಲಕ ನಿಯಮ ಉಲ್ಲಂಘನೆಗಳ ಛಾಯಾಚಿತ್ರಗಳನ್ನು ಸೆರೆಹಿಡಿದು, ಅದರ ಆಧಾರದಲ್ಲಿ ಚಲನ್ ವಿತರಿಸಲಾಗುತ್ತಿದೆ. ನಂತರ ಸಂಬಂಧಪಟ್ಟ ವಾಹನ ಮಾಲೀಕರಿಗೆ ಅಂಚೆ ಮೂಲಕ ದಂಡ ಪಾವತಿಸಲು ನೋಟಿಸ್ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ‘ಫೀಲ್ಡ್ ಟ್ರಾಫಿಕ್ ವೈಲೇಷನ್ ರಿಪೋರ್ಟ್’ (FTIR) ಎಂಬ ಡಿಜಿಟಲ್ ತಂತ್ರಾಂಶವನ್ನು ಬಿಟಿಪಿ ಅಸ್ರಂ ಆಪ್ ಮೂಲಕ ದಾಖಲಿಸುವ ಹೊಸ ಕ್ರಮಕ್ಕೂ ಚಾಲನೆ ನೀಡಲಾಗಿದೆ.
ಪೊಲೀಸರ ಅಂಕಿಅಂಶಗಳು ನಿಯಮ ಉಲ್ಲಂಘನೆ ಪ್ರಕರಣಗಳ ಏರಿಕೆಯನ್ನು ಸ್ಪಷ್ಟಪಡಿಸುತ್ತವೆ. ಜಾಲಹಳ್ಳಿ ಸಂಚಾರಿ ಠಾಣೆಯಲ್ಲಿ 2024ರಲ್ಲಿ 83 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಅದು 640ಕ್ಕೆ ಏರಿಕೆಯಾಗಿದೆ. ಈ ವರ್ಷದ ಮೇ ವರೆಗೆ 53 ಪ್ರಕರಣಗಳು ದಾಖಲಾಗಿದ್ದು, ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ. ಜ್ಞಾನಭಾರತಿ ಠಾಣೆಯಲ್ಲಿ 2025ರಲ್ಲಿ 1,646 ಪ್ರಕರಣಗಳು ದಾಖಲಾಗಿದ್ದು, ₹16.46 ಲಕ್ಷ ದಂಡ ವಸೂಲಾಗಿದೆ. ಮಡಿವಾಳ, ಬೆಳ್ಳಂದೂರು, ಸದಾಶಿವನಗರ ಸೇರಿದಂತೆ ಹಲವು ಠಾಣೆಗಳಲ್ಲೂ ಇದೇ ರೀತಿಯ ಏರಿಕೆ ಕಂಡುಬಂದಿದೆ.
ಇದಲ್ಲದೆ ಎಲೆಕ್ಟ್ರಾನಿಕ್ ಸಿಟಿ, ಹಲಸೂರು, ಆಡುಗೋಡಿ, ಸಂಜಯನಗರ, ಹೆಣ್ಣೂರು ಮತ್ತು ಎಚ್‌ಎಸ್‌ಆರ್ ಲೇಔಟ್ ಪ್ರದೇಶಗಳಲ್ಲೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯ ಪ್ರಕರಣಗಳು ಹೆಚ್ಚಾಗಿವೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್‌ನಲ್ಲಿ ಮಾತನಾಡುವುದು ಕೇವಲ ಕಾನೂನುಭಂಗವಲ್ಲ, ಜೀವಕ್ಕೆ ಅಪಾಯ ತರುವ ನಿರ್ಲಕ್ಷ್ಯವೂ ಹೌದು.
ನಗರದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು, ಅಪಘಾತಗಳನ್ನು ತಗ್ಗಿಸುವುದು ಮತ್ತು ಸಂಚಾರ ಶಿಸ್ತು ಬೆಳೆಸುವುದು ಬೆಂಗಳೂರು ಸಂಚಾರಿ ಪೊಲೀಸರ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ಎಲ್ಲಾ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮೊಬೈಲ್ ಬಳಕೆಯಿಂದ ದೂರವಿದ್ದು, ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
