ಬೆಂಗಳೂರು ಸಬರ್ಬನ್ ರೈಲಿಗೆ ವೇಗ: ಟೆಂಡರ್‌ನಲ್ಲಿ ಅದಾನಿ ಸಂಸ್ಥೆ L1 ಬಿಡ್ಡರ್!

ಪಶ್ಚಾತ್ತಾಪ (13)

ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ (BSRP) ಕಾಮಗಾರಿಗಳಿಗೆ ಇದೀಗ ಮತ್ತಷ್ಟು ಚುರುಕು ಸಿಕ್ಕಿದೆ. ಮಲ್ಲಿಗೆ ಕಾರಿಡಾರ್‌ನ ಪ್ರಮುಖ ಸಿವಿಲ್ ಕಾಮಗಾರಿಗಳ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಬೆಂಬಲಿತ ಸೆಮಿಂಡಿಯಾ ಪ್ರಾಜೆಕ್ಟ್ಸ್ ಲಿಮಿಟೆಡ್ (Cemindia Projects Ltd) ರೂ. 665.61 ಕೋಟಿಯ ಬಿಡ್ ಸಲ್ಲಿಸಿ L1 ಅಂದರೆ ಅತ್ಯಂತ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿದೆ.

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಜಂಟಿ ಸಹಯೋಗದ K-RIDE ಈ ಟೆಂಡರ್‌ನ್ನು ಆಹ್ವಾನಿಸಿತ್ತು. ಕಾಮಗಾರಿಗೆ K-RIDE ರೂ.671.65 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಿತ್ತು. ಇದಕ್ಕಿಂತ ಸುಮಾರು ರೂ. 6 ಕೋಟಿಗೂ ಕಡಿಮೆ ಮೊತ್ತಕ್ಕೆ ಸೆಮಿಂಡಿಯಾ ಬಿಡ್ ಸಲ್ಲಿಸಿದೆ. ಎರಡನೇ ಅತಿ ಕಡಿಮೆ ಬಿಡ್‌ದಾರರಾಗಿದ್ದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ರೂ.759.05 ಕೋಟಿ ಮೊತ್ತವನ್ನು ಉಲ್ಲೇಖಿಸಿತ್ತು.

ಮತ್ತಿಕೆರೆಯಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್

ಈ ಟೆಂಡರ್ ಪ್ಯಾಕೇಜ್‌ನಲ್ಲಿ ಮಲ್ಲಿಗೆ ಕಾರಿಡಾರ್-2ರ ಬೆನ್ನಿಗಾನಹಳ್ಳಿ–ಚಿಕ್ಕಬಾಣಾವರ ಮಾರ್ಗದ ಸುಮಾರು 7.8 ಕಿ.ಮೀ ಉದ್ದದ ಮೇಲ್ಸೇತುವೆ ಮತ್ತು ರಾಂಪ್‌ಗಳ ನಿರ್ಮಾಣ ಸೇರಿದೆ. ಪ್ರಮುಖವಾಗಿ ಯಶವಂತಪುರ–ಮತ್ತಿಕೆರೆ ನಡುವೆ ಸುಮಾರು 1.2 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗಲಿದೆ.

ಈ ವಿನ್ಯಾಸದಲ್ಲಿ ಕೆಳಭಾಗದಲ್ಲಿ ರಸ್ತೆ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮೇಲ್ಭಾಗದಲ್ಲಿ ಉಪನಗರ ರೈಲು ಮಾರ್ಗ ಹಾಗೂ ಎಲಿವೇಟೆಡ್ ರೈಲು ನಿಲ್ದಾಣ ನಿರ್ಮಿಸುವ ಯೋಜನೆಯಿದೆ. ಜಾಗದ ಕೊರತೆ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಮತ್ತಿಕೆರೆ–ಯಶವಂತಪುರ ಭಾಗದಲ್ಲಿ ಈ ಯೋಜನೆ ಪ್ರಮುಖ ಬದಲಾವಣೆ ತರಲಿದೆ ಎಂಬ ನಿರೀಕ್ಷೆಯಿದೆ.

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯಾದೇಶ ನೀಡಿದ ಬಳಿಕ ಕಾಮಗಾರಿಯನ್ನು 24 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ನಾಲ್ಕು ಕಾರಿಡಾರ್‌ಗಳ ಬೃಹತ್ ಯೋಜನೆ

ಬೆಂಗಳೂರು ಸಬರ್ಬನ್ ರೈಲು ಯೋಜನೆಯಲ್ಲಿ ಒಟ್ಟು ನಾಲ್ಕು ಕಾರಿಡಾರ್‌ಗಳಿವೆ. ಮಲ್ಲಿಗೆ ಕಾರಿಡಾರ್ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವರೆಗೆ 25 ಕಿ.ಮೀ ಉದ್ದವಿದ್ದು, 14 ನಿಲ್ದಾಣಗಳನ್ನು ಹೊಂದಲಿದೆ. ಕನಕ ಕಾರಿಡಾರ್ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ 46 ಕಿ.ಮೀ, ಸಂಪಿಗೆ ಕಾರಿಡಾರ್ ಮೆಜೆಸ್ಟಿಕ್‌ನಿಂದ ದೇವನಹಳ್ಳಿವರೆಗೆ 41 ಕಿ.ಮೀ ಹಾಗೂ ಪಾರಿಜಾತ ಕಾರಿಡಾರ್ ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ 35 ಕಿ.ಮೀ ಉದ್ದವಿದೆ.

ಕನಕ ಕಾರಿಡಾರ್‌ನ ಮತ್ತೊಂದು ಕಾಮಗಾರಿಗೆ RNS-GPL JV ರೂ. 342 ಕೋಟಿ ಬಿಡ್ ಸಲ್ಲಿಸಿದ್ದು, ಏಕೈಕ ಬಿಡ್‌ದಾರನಾಗಿದೆ. ಸೋಲದೇವನಹಳ್ಳಿಯಲ್ಲಿ ರೈಲು ನಿರ್ವಹಣಾ ಡಿಪೋ ಮತ್ತು ರೋಲಿಂಗ್ ಸ್ಟಾಕ್‌ಗಾಗಿ ಸುಮಾರು ರೂ. 200 ಕೋಟಿ ಮೌಲ್ಯದ ಗುತ್ತಿಗೆ ಅಂತಿಮ ಹಂತದಲ್ಲಿದೆ.

ಈ ಬೆಳವಣಿಗೆಗಳಿಂದ ಬೆಂಗಳೂರಿನ ಉಪನಗರ ರೈಲು ಯೋಜನೆ ಮತ್ತೆ ವೇಗ ಪಡೆದುಕೊಂಡಿದ್ದು, ನಗರದ ಸಂಚಾರ ದಟ್ಟಣೆಗೆ ದೀರ್ಘಾವಧಿಯಲ್ಲಿ ಪರಿಹಾರ ಕಲ್ಪಿಸುವ ನಿರೀಕ್ಷೆ ಹೆಚ್ಚಾಗಿದೆ.

Exit mobile version