ಬೆಂಗಳೂರು ಸುತ್ತಾಡಲು ಬಂತು ಡಬಲ್ ಡೆಕ್ಕರ್ ಬಸ್: ಪ್ರಮುಖ ತಾಣಗಳ ವೀಕ್ಷಣೆಗೆ ಅವಕಾಶ

ಸಾವು (8)

ಸಿಲಿಕಾನ್ ಸಿಟಿ ಬೆಂಗಳೂರು ತನ್ನ ಐತಿಹಾಸಿಕ ಪರಂಪರೆ, ಹಸಿರು ಸೌಂದರ್ಯ, ಆಡಳಿತ ಕೇಂದ್ರಗಳು ಹಾಗೂ ಆಧುನಿಕ ನಗರ ಜೀವನಶೈಲಿಗೆ ಹೆಸರುವಾಸಿಯಾಗಿದೆ. ನಗರದ ಪ್ರಮುಖ ತಾಣಗಳನ್ನು ಒಂದೇ ಪ್ರವಾಸದಲ್ಲಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ‘ಬೆಂಗಳೂರು ಡಬಲ್ ಡೆಕ್ಕರ್ ಸಿಟಿ ಟೂರ್’ ವಿಶೇಷ ಅನುಭವ ನೀಡುತ್ತಿದೆ. ಮುಕ್ತ ಮೇಲ್ಚಾವಣಿ ಹೊಂದಿರುವ ಡಬಲ್ ಡೆಕ್ಕರ್ ಬಸ್‌ನಲ್ಲಿ ನಗರದ ವಿವಿಧ ಭಾಗಗಳನ್ನು ವೀಕ್ಷಿಸುವ ಅವಕಾಶ ಇಲ್ಲಿ ದೊರೆಯುತ್ತದೆ.

ಬಸ್‌ನ ಮೇಲಿನ ಡೆಕ್‌ನಲ್ಲಿ ಕುಳಿತುಕೊಂಡು ಬೆಂಗಳೂರಿನ ಪ್ರಮುಖ ರಸ್ತೆಗಳು, ಐತಿಹಾಸಿಕ ಕಟ್ಟಡಗಳು, ಹಸಿರು ತಾಣಗಳು ಹಾಗೂ ಕ್ರೀಡಾಂಗಣಗಳನ್ನು ವಿಶಾಲವಾಗಿ ವೀಕ್ಷಿಸಬಹುದು. ವಿಶೇಷವಾಗಿ ನಗರದ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಾದ ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್, ಸರ್ಕಾರಿ ವಸ್ತುಸಂಗ್ರಹಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತುಸಂಗ್ರಹಾಲಯಗಳು ಪ್ರವಾಸದ ಪ್ರಮುಖ ಆಕರ್ಷಣೆಗಳಾಗಿವೆ.

ಅದೇ ರೀತಿ ಬೆಂಗಳೂರಿನ ಆಡಳಿತ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಬಿಬಿಎಂಪಿ ಕಚೇರಿ, ಕರ್ನಾಟಕ ಹೈಕೋರ್ಟ್‌ನ ಕೆಂಪು ಕಟ್ಟಡ, ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ ಸೇರಿದಂತೆ ಹಲವು ಪ್ರಮುಖ ಕಟ್ಟಡಗಳನ್ನು ಪ್ರವಾಸದ ವೇಳೆ ವೀಕ್ಷಿಸಬಹುದಾಗಿದೆ.

ಹಸಿರು ತಾಣಗಳ ಸೌಂದರ್ಯ

ಬೆಂಗಳೂರು ಎಂದರೆ ಉದ್ಯಾನನಗರಿ ಎಂಬ ಹೆಗ್ಗಳಿಕೆಯೂ ಇದೆ. ಈ ಪ್ರವಾಸದಲ್ಲಿ ಕಬ್ಬನ್ ಪಾರ್ಕ್, ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯ ಹಸಿರು ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ನಗರದ ಕ್ರೀಡಾ ಮತ್ತು ಆಧುನಿಕ ತಾಣಗಳಾದ ಕಂಠೀರವ ಕ್ರೀಡಾಂಗಣ, ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಹಾಗೂ ಯುಬಿ ಸಿಟಿಯನ್ನೂ ಪ್ರವಾಸದ ಸಂದರ್ಭದಲ್ಲಿ ವೀಕ್ಷಿಸುವ ಅವಕಾಶವಿದೆ.

ಎಲ್ಲಿಂದ ಎಲ್ಲಿಗೆ ಪ್ರವಾಸ?

ಬೆಂಗಳೂರು ಡಬಲ್ ಡೆಕ್ಕರ್ ಸಿಟಿ ಟೂರ್ ರವೀಂದ್ರ ಕಲಾಕ್ಷೇತ್ರದಿಂದ ಆರಂಭವಾಗುತ್ತದೆ. ಅಲ್ಲಿಂದ ಟೌನ್ ಹಾಲ್, ಬಿಬಿಎಂಪಿ ಕಚೇರಿ, ಹಡ್ಸನ್ ವೃತ್ತ, ಕಸ್ತೂರಿಬಾ ರಸ್ತೆ, ಕಂಠೀರವ ಕ್ರೀಡಾಂಗಣ, ವಿಠಲ್ ಮಲ್ಯ ರಸ್ತೆ, ಯುಬಿ ಸಿಟಿ, ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ವಿಶ್ವೇಶ್ವರಯ್ಯ ಮ್ಯೂಸಿಯಂ ಮೂಲಕ ಸಾಗುತ್ತದೆ.

ಮುಂದೆ ಅನಿಲ್ ಕುಂಬ್ಳೆ ವೃತ್ತ, ಕಬ್ಬನ್ ಪಾರ್ಕ್, ಕ್ವೀನ್ಸ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ, ಕಬ್ಬನ್ ರಸ್ತೆ, ಮಿನ್ಸ್ಕ್ ಸ್ಕ್ವೇರ್, ಪ್ರಧಾನ ಅಂಚೆ ಕಚೇರಿ, ಯುಟಿಲಿಟಿ ಬಿಲ್ಡಿಂಗ್, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬಾರ್ ಕೌನ್ಸಿಲ್ ಹಾಗೂ ಕರ್ನಾಟಕ ಹೈಕೋರ್ಟ್ ಮೂಲಕ ಪ್ರವಾಸ ಮುಂದುವರಿಯುತ್ತದೆ. ಬಳಿಕ ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್, ಕೆ.ಆರ್. ವೃತ್ತ ಮತ್ತು ನೃಪತುಂಗ ರಸ್ತೆ ಮಾರ್ಗವಾಗಿ ಮತ್ತೆ ರವೀಂದ್ರ ಕಲಾಕ್ಷೇತ್ರಕ್ಕೆ ಮರಳುತ್ತದೆ.

ಈ ಪ್ರವಾಸದಲ್ಲಿ ಮಾರ್ಗದರ್ಶನ ಸಹಿತ ನಗರ ವೀಕ್ಷಣೆಯ ಅನುಭವ ಪಡೆಯಬಹುದು. ವೃತ್ತಾಕಾರದ ಪ್ರವಾಸ ಮಾರ್ಗಗಳ ಜೊತೆಗೆ ಹಗಲು ಮತ್ತು ರಾತ್ರಿ ವೇಳೆಯ ನಗರ ವೀಕ್ಷಣೆಯ ಆಯ್ಕೆಗಳೂ ಲಭ್ಯವಿದೆ.

ಮೇಲಿನ ಡೆಕ್‌ನಲ್ಲಿ ಕುಳಿತುಕೊಂಡರೆ ನಗರದ ವಿಶಾಲ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಯುಬಿ ಸಿಟಿ ಸುತ್ತಮುತ್ತ ಫೋಟೋಗಳನ್ನು ತೆಗೆದುಕೊಳ್ಳುವ ಮೂಲಕ ಪ್ರವಾಸದ ನೆನಪುಗಳನ್ನು ಮತ್ತಷ್ಟು ವಿಶೇಷವಾಗಿಸಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಲಹೆ ನೀಡಿದೆ. ಬೆಂಗಳೂರಿನ ಇತಿಹಾಸ, ಪ್ರಕೃತಿ ಮತ್ತು ಆಧುನಿಕತೆಯನ್ನು ಒಂದೇ ಪ್ರವಾಸದಲ್ಲಿ ಅನುಭವಿಸಲು ಬಯಸುವವರಿಗೆ ಈ ಡಬಲ್ ಡೆಕ್ಕರ್ ಸಿಟಿ ಟೂರ್ ವಿಭಿನ್ನ ಅನುಭವವಾಗಲಿದೆ.

Exit mobile version