ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಹಳೆಯ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ‘ಬೆಂಗಳೂರು ಕರಗ’ ಉತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ ದೊರೆತಿದೆ. ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಈ ಐತಿಹಾಸಿಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದ್ದು, ಇಡೀ ನಗರವು ಈಗ ಹಬ್ಬದ ಕಳೆ ಕಟ್ಟಿದೆ.
ಉತ್ಸವದ ಪ್ರಮುಖ ದಿನಾಂಕಗಳು ಮತ್ತು ವಿಧಿವಿಧಾನಗಳು
ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಮಾಹಿತಿ ನೀಡಿದಂತೆ, ಮಾರ್ಚ್ 25 ರಿಂದ 28 ರವರೆಗೆ ಪ್ರತಿದಿನ ದೇವಾಲಯದಲ್ಲಿ ವಿಶೇಷ ಪೂಜೆಗಳು ಜರುಗಲಿವೆ. ಉತ್ಸವದ ಪ್ರಮುಖ ಘಟ್ಟಗಳು ಇಲ್ಲಿವೆ:
-
ಮಾರ್ಚ್ 29 (ಭಾನುವಾರ): ವಿಶೇಷ ಆರತಿ ಉತ್ಸವ.
-
ಮಾರ್ಚ್ 30 (ಸೋಮವಾರ): ಹಸಿ ಕರಗ ಉತ್ಸವ.
-
ಮಾರ್ಚ್ 31 (ಮಂಗಳವಾರ): ಪೊಂಗಲ್ ಸೇವೆ.
-
ಏಪ್ರಿಲ್ 1 (ಬುಧವಾರ): ಚೈತ್ರ ಪೂರ್ಣಿಮೆಯ ಪವಿತ್ರ ರಾತ್ರಿ ‘ಬೆಂಗಳೂರು ಕರಗ’ ಶಕ್ತ್ಯೋತ್ಸವ ಮತ್ತು ಮಹಾರಥೋತ್ಸವ.
-
ಏಪ್ರಿಲ್ 2 (ಗುರುವಾರ): ಗಾವು ಶಾಂತಿ ಪ್ರಕ್ರಿಯೆ.
-
ಏಪ್ರಿಲ್ 3 (ಶುಕ್ರವಾರ): ವಸಂತೋತ್ಸವ ಮತ್ತು ಧ್ವಜಾರೋಹಣದ ಇಳಿಕೆಯೊಂದಿಗೆ ಉತ್ಸವ ಸಂಪನ್ನ.
ಕರಗದ ಹಾದಿ ಮತ್ತು ಧಾರ್ಮಿಕ ಮಹತ್ವ
ಈ ಬಾರಿ ಕರಗದ ಪೂಜಾರಿ ಎ. ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಸಾಗಲಿದ್ದಾರೆ. ಏಪ್ರಿಲ್ 1ರ ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಕರಗವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಹಲಸೂರು ಆಂಜನೇಯಸ್ವಾಮಿ ದೇವಾಲಯ, ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಸುಮಾರು 26 ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಲಿದೆ. ವಿಶೇಷವಾಗಿ ಕರಗವು ಸೌಹಾರ್ದತೆಯ ಸಂಕೇತವಾಗಿ ಮುಸ್ತಾನ್ ಸಾಹೇಬರ ದರ್ಗಾಕ್ಕೂ ಭೇಟಿ ನೀಡಲಿದೆ. ಕಬ್ಬನ್ ಪಾರ್ಕ್‌ನ ಕರಗದ ಕುಂಟೆ, ಸಂಪಂಗಿ ಕೆರೆಯ ಶಕ್ತಿಪೀಠಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಮೈಸೂರು ಮಾದರಿಯ ದೀಪಾಲಂಕಾರ
ಈ ಬಾರಿಯ ಕರಗಕ್ಕೆ ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಮೈಸೂರಿನಲ್ಲಿ ದೀಪಾಲಂಕಾರ ಮಾಡುವ ಪರಿಣತರೇ ಬೆಂಗಳೂರು ಕರಗಕ್ಕೂ ಮೆರುಗು ನೀಡುತ್ತಿರುವುದು ವಿಶೇಷ. ಏಪ್ರಿಲ್ 1ರ ರಾತ್ರಿ ನಡೆಯುವ ಕರಗ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಿದ್ದಾರೆ.
ನಗರ್ತಪೇಟೆ, ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಸೇರಿದಂತೆ ಹಳೇ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕರಗದ ವೈಭವ ಕಣ್ಮನ ಸೆಳೆಯಲಿದ್ದು, ಲಕ್ಷಾಂತರ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
